ಹೈದರಾಬಾದ್: ಗುರುವಾರದ ದಿನದಂತ್ಯಕ್ಕೆ ಭಾರತದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 3,66,946 ಕ್ಕೇರಿದ್ದು, ಸದ್ಯ 1,60,384 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 1,94,324 ಜನ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು ಇಡೀ ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 12,227 ಕ್ಕೇರಿದೆ.
ಪ್ರಮುಖ ರಾಜ್ಯಗಳ ಕೊರೊನಾ ಸ್ಥಿತಿಗತಿ ಕುರಿತ ಮಾಹಿತಿ ಹೀಗಿದೆ:
ದೆಹಲಿ
ಗುರುವಾರ ದೆಹಲಿ ಮಹಾನಗರದ ಕಂಟೇನ್ಮೆಂಟ್ ಜೋನ್ ಒಳಗೆ ಹಾಗೂ ಹೊರಗೆ ಒಟ್ಟು 169 ಕೇಂದ್ರಗಳಲ್ಲಿ ರ್ಯಾಪಿಡ್ ಆ್ಯಂಟಿಜೆನ್ ಮೆಥಡಾಲಜಿ ಮೂಲಕ ಕೋವಿಡ್-19 ಟೆಸ್ಟ್ಗಳನ್ನು ಸರ್ಕಾರ ಆರಂಭಿಸಿದೆ. ಒಟ್ಟು 341 ತಂಡಗಳು ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ಗಳನ್ನು ನಡೆಸುತ್ತಿದ್ದು, ಈ ಟೆಸ್ಟ್ಗಳ ವರದಿ 30 ನಿಮಿಷಗಳಲ್ಲಿ ಸಿಗುತ್ತಿದೆ.
ಕೋವಿಡ್ RT-PCR ಟೆಸ್ಟ್ಗೆ 2,400 ರೂ. ದರ ನಿಗದಿ ಪಡಿಸಿ ಇಂದು ಸರ್ಕಾರ ಆದೇಶ ಹೊರಡಿಸಿದೆ. ಪರೀಕ್ಷೆಗಾಗಿ ಎಲ್ಲ ವೆಚ್ಚಗಳನ್ನು ಸೇರಿಸಿ 2,400 ರೂ.ಗಳಿಗಿಂತ ಹೆಚ್ಚಿಗೆ ಚಾರ್ಜ್ ಮಾಡುವಂತಿಲ್ಲ.
ಮಹಾರಾಷ್ಟ್ರ
ಕೋವಿಡ್-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಬಾರಿ ಗಣೇಶ ಚತುರ್ಥಿಯನ್ನು ಸರಳವಾಗಿ ಆಚರಿಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕರೆ ನೀಡಿದ್ದು, ಗಣೇಶ ಮಂಡಳಿಗಳು ಹೆಚ್ಚಿನ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಅವರು ಹೇಳಿದ್ದಾರೆ.
ಇನ್ನೂವರೆಗೂ ಕೊರೊನಾ ವೈರಸ್ನ ಆತಂಕ ದೂರವಾಗಿಲ್ಲದ ಕಾರಣ ಪ್ರತಿವರ್ಷದಂತೆ ಅದ್ದೂರಿ ಗಣೇಶ ಹಬ್ಬ ಆಚರಣೆ ಈ ಬಾರಿ ಸಾಧ್ಯವಾಗದು. ಗಣೇಶ ಹಬ್ಬದ ಸಮಯದಲ್ಲಿ ಎಲ್ಲಿಯೂ ಜನಸಂದಣಿ ಉಂಟಾಗದಂತೆ ನೋಡಿಕೊಳ್ಳಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಈ ಬಾರಿಯ ಗಣೇಶ ಹಬ್ಬ ಆಗಸ್ಟ್ 22 ರಿಂದ 10 ದಿನಗಳ ಕಾಲ ನಡೆಯಲಿದೆ.
ಕರ್ನಾಟಕ
ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜನತೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಗುರುವಾರ ಕರ್ನಾಟಕ ರಾಜ್ಯಾದ್ಯಂತ ಮಾಸ್ಕ್ ಡೇ ಆಚರಿಸಲಾಯಿತು. ರಾಜಧಾನಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪ್ರದೇಶದಲ್ಲಿ ಮಾಸ್ಕ್ ಡೇ ಅಂಗವಾಗಿ ಪೊಲೀಸ್ ಬ್ಯಾಂಡ್ ವತಿಯಿಂದ ಅಶ್ವಾರೋಹಿಗಳಿಂದ ಜಾಗೃತಿ ಜಾಥಾ ನಡೆಯಿತು. ಮಾಜಿ ಕ್ರಿಕೆಟ್ ಪಟು ಅನಿಲ್ ಕುಂಬ್ಳೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಸ್ಕ್ ಧರಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.
ಬಾಕಿ ಉಳಿದಿದ್ದ ಪಿಯುಸಿ ದ್ವಿತೀಯ ವರ್ಷದ ಒಂದೇ ಒಂದು ವಿಷಯದ ಪರೀಕ್ಷೆ ಇಂದು ರಾಜ್ಯಾದ್ಯಂತ ನಡೆಯಿತು. ಪರೀಕ್ಷೆಗೆ ನೋಂದಾಯಿಸಿದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ 95.46 ರಷ್ಟು ಅಂದರೆ 5,68,975 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 27,022 ವಿದ್ಯಾರ್ಥಿಗಳು ಗೈರಾದರು.
ಕೇರಳ
ಗುರುವಾರ ರಾಜ್ಯದಲ್ಲಿ ಮತ್ತೊಂದು ಕೋವಿಡ್-19 ಸಾವು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 21 ಕ್ಕೇರಿದೆ. ಅಬಕಾರಿ ಇಲಾಖೆಯಲ್ಲಿ ವಾಹನ ಚಾಲಕನಾಗಿದ್ದ 26 ವರ್ಷದ ಯುವಕ ಕೋವಿಡ್ಗೆ ಬಲಿಯಾಗಿದ್ದಾನೆ. ಮೃತನಿಗೆ ಯಾವ ಮೂಲದಿಂದ ಕೋವಿಡ್ ಸೋಂಕು ತಗುಲಿತು ಎಂಬುದನ್ನು ಪತ್ತೆ ಮಾಡಲು ಕೇರಳ ಸರ್ಕಾರ ತಂಡವೊಂದನ್ನು ರಚಿಸಿದೆ.
ಗುರುವಾರ ಹೊಸದಾಗಿ 97 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 2794 ಕ್ಕೇರಿದೆ.
ಗುಜರಾತ್
ಕೊರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಈ ಬಾರಿ ಅಹ್ಮದಾಬಾದ್ನ ಭಗವಾನ್ ಜಗನ್ನಾಥ ರಥ ಯಾತ್ರೆಯನ್ನು ನಡೆಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಗುಜರಾತ್ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಜಗನ್ನಾಥ ಮಂದಿರ ಟ್ರಸ್ಟ್ ಆಯೋಜಿಸುವ ರಥಯಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಜೂನ್ 23 ರಿಂದ ಆರಂಭವಾಗಬೇಕಿರುವ ರಥಯಾತ್ರೆಗೆ ರಾಜ್ಯ ಸರ್ಕಾರ ಈವರೆಗೂ ಅನುಮತಿ ನೀಡಿಲ್ಲ. ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತ ಹಿತೇಶ್ ಚಾವ್ಡಾ ಎಂಬುವರು ಸಲ್ಲಿಸಿರುವ ಪಿಐಎಲ್ ಇನ್ನೆರಡು ದಿನಗಳಲ್ಲಿ ವಿಚಾರಣೆಗೆ ಬರುವ ಸಾಧ್ಯತೆಯಿದೆ.
ಮಧ್ಯ ಪ್ರದೇಶ
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಆರು ಜಿಲ್ಲೆಗಳು ಕೊರೊನಾದಿಂದ ಮುಕ್ತವಾಗಿವೆ ಎಂದು ಗೃಹ ಮಂತ್ರಿ ನರೋತ್ತಮ ಮಿಶ್ರಾ ಗುರುವಾರ ತಿಳಿಸಿದ್ದಾರೆ. ಕೊರೊನಾದಿಂದ ಗುಣಮುಖರಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು, ಒಟ್ಟಾರೆ ಶೇ 75.5 ರಷ್ಟು ರೋಗಿಗಳು ಸೋಂಕಿನಿಂದ ಗುಣಮುಖರಾಗಿದ್ದಾರೆ. ಗುರುವಾರ 182 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 2308 ಕ್ಕೆ ಏರಿಕೆಯಾಗಿದೆ.
ಬಿಹಾರ
ಮಾಜಿ ಬಿಜೆಪಿ ಸಂಸದೆ ಪುತುಲ್ ಕುಮಾರಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕೂ ಮುನ್ನ ಆರ್ಜೆಡಿಯ ಮಾಜಿ ಸಂಸದ ರಘುವಂಶ ಪ್ರಸಾದ ಸಿಂಗ್ ಅವರಿಗೆ ಕೊರೊನಾ ತಗುಲಿದ್ದು ಪತ್ತೆಯಾಗಿತ್ತು. ಈ ಇಬ್ಬರು ನಾಯಕರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಗುರುವಾರ ರಾಜ್ಯದಲ್ಲಿ 53 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣ ಸಂಖ್ಯೆ 6993 ಕ್ಕೇರಿದೆ. ಈವರೆಗೆ 39 ಜನ ರಾಜ್ಯದಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ.
ಜಾರ್ಖಂಡ್
ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಇಡೀ ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲ ರೀತಿಯ ತಂಬಾಕು ಉತ್ಪನ್ನಗಳ ಬಳಕೆಯನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಕೊರೊನಾ ಸಂಪೂರ್ಣ ನಿರ್ಮೂಲನೆ ಆಗುವವರೆಗೂ ಯಾರೂ ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಬಳಸಕೂಡದು ಎಂದು ಸರ್ಕಾರ ತಿಳಿಸಿದೆ.
ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯ ಕೈದಿಗಳ ವಾರ್ಡ್ನಲ್ಲಿ ದಾಖಲಾಗಿದ್ದ ವ್ಯಕ್ತಿಯೋರ್ವನಿಗೆ ಕೊರೊನಾ ಸೋಂಕು ತಗುಲಿದೆ. ಖುಂಟಿ ಜೈಲಿನಿಂದ ಬಂದಿದ್ದ ಈತನ ರಕ್ತ ತಪಾಸಣೆ ವೇಳೆ ಈ ವಿಷಯ ಬೆಳಕಿಗೆ ಬಂದಿದೆ. ಈ ಪ್ರಕರಣದ ನಂತರ ಜೈಲಿನಲ್ಲಿರುವ 15 ಕೈದಿಗಳನ್ನು ಪ್ರತ್ಯೇಕಿಸಿ ನಿಗಾದಲ್ಲಿಡಲಾಗಿದೆ.