ಸಸಾರಾಮ್(ಬಿಹಾರ್): ಕೊರೊನಾ ನಿಯಂತ್ರಣಕ್ಕಾಗಿ ಹೋರಾಡುತ್ತಿರುವ ಕೆಲ ಸಿಬ್ಬಂದಿ ಸದ್ಯದ ಖಾಸಗಿ ಜೀವನದ ಕತೆಗಳನ್ನು ಕೇಳಿದ್ರೆ ಕಣ್ಣು ಒದ್ದೆಯಾಗುತ್ತೆ. ಬಿರು ಬಿಸಿಲಿನಲ್ಲಿ 11 ತಿಂಗಳ ಮಗುವನ್ನು ತನ್ನ ಕಂಕುಳಲ್ಲಿ ಇರಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ಈ ತಾಯಿಗೆ ಅದೆಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.
ಬಿಹಾರದಲ್ಲಿ, ರಾಜ್ಯ ಪೊಲೀಸ್ ಕಾನ್‌ಸ್ಟೇಬಲ್ ಆಗಿರುವ ಪೂಜಾ ಕುಮಾರಿ, ಸಸಾರಂನ ಮುಖ್ಯ ಅಡ್ಡಹಾದಿಯಲ್ಲಿ ಕರ್ತವ್ಯದಲ್ಲಿದ್ದಾರೆ. ಅವರು ತಮ್ಮ ಪಾಳಿಯಲ್ಲಿ ಸತತ 12 ಗಂಟೆಗಳ ಕಾಲ ಮಗುವನ್ನು ಕೂಡ ತಮ್ಮ ಜೊತೆಯಲ್ಲೇ ಇರಿಸಿಕೊಂಡು ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.
ಕುಮಾರಿ ಈ ಹಿಂದೆ, ತನ್ನ ಮಗುವನ್ನು ಮನೆಯಲ್ಲಿ ಬಿಟ್ಟು ಒಬ್ಬಂಟಿಯಾಗಿ ಕೆಲಸಕ್ಕೆ ಹೋಗುತ್ತಿದ್ದರು. ಆದರೆ, ಮಗುವನ್ನು ಅಷ್ಟುಹೊತ್ತು ಬಿಟ್ಟಿರಲಾರದೇ ತನ್ನೊಂದಿಗೆ ಕರೆತರಲು ನಿರ್ಧರಿಸಿದ್ದಾರೆ. ಬಿಹಾರ ಡಿಜಿಪಿ ಗುಪ್ತೇಶ್ವರ ಪಾಂಡೆ ಪೂಜಾ ಕುಮಾರಿಯನ್ನು ಪ್ರೋತ್ಸಾಹಿಸಿ ಮತ್ತು ಅವರ ಸಮರ್ಪಣೆಯನ್ನು ಶ್ಲಾಘಿಸಿದ್ದಾರೆ.