ಗುವಾಹಟಿ : ಎಲ್ಲ ಎಂಟು ಈಶಾನ್ಯ ರಾಜ್ಯಗಳಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಸ್ಸೋಂ ಮತ್ತು ತ್ರಿಪುರಾದಲ್ಲಿ ಮತ್ತಿಬ್ಬರು ಮೃತಪಟ್ಟಿದ್ದಾರೆ.
ಅಸ್ಸೋಂ 58 ವರ್ಷದ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದು, ಚೆನ್ನೈನಿಂದ ಹಿಂದುರುಗಿದ ಬಳಿಕ ಪಾಸಿಟಿವ್ ಬಂದಿದ್ದರಿಂದ ಆಗ್ನೇಯ ಅಸ್ಸೋಂನ ಡಿಫು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿದ್ದ ಇವರು ಮೃತಪಟ್ಟಿರುವುದಾಗಿ ಗುವಾಹಟಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್ಗೆ ಬಲಿಯಾದವರ ಸಂಖ್ಯೆ ಐದಕ್ಕೇರಿದೆ.
ತ್ರಿಪುರದಲ್ಲಿ 42 ವರ್ಷದ ವ್ಯಕ್ತಿ ಕೋವಿಡ್ನಿಂದ ಮೃತಪಟ್ಟಿರುವುದಾಗಿ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಪ್ರಕಟಿಸಿದ್ದು, ಪಾರ್ಶ್ವವಾಯು ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಇವರು ಮೇ. 1 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 3 ರಂದು ಕೋವಿಡ್ ಸೋಂಕು ತಗಲಿರುವುದು ದೃಢಪಟ್ಟಿತ್ತು ಎಂದು ತಿಳಿಸಿದ್ದಾರೆ.
ಮೃತನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಕಾನೂನು ಮತ್ತು ಶಿಕ್ಷಣ ಸಚಿವ ರತನ್ ಲಾಲ್ ತಿಳಿಸಿದ್ದಾರೆ. ಜೂನ್ 2 ರಂದು ತ್ರಿಪುರಾ ಸರ್ಕಾರ ನಡೆಸುತ್ತಿರುವ ಗೋವಿಂದ್ ವಲ್ಲಭ್ ಪಂತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 50 ವರ್ಷದ ಕೋವಿಡ್ ಬಾಧಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದುವರೆಗೆ ಎಂಟು ಈಶಾನ್ಯ ರಾಜ್ಯಗಳಲ್ಲಿ 4,426 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 3,049 ಸಕ್ರಿಯ ಪ್ರಕರಣಗಳಿವೆ. ಈಶಾನ್ಯ ರಾಜ್ಯಗಳು ಕೊರೊನಾದಿಂದ ಅಷ್ಟೊಂದು ಸಂಕಷ್ಟ ಎದುರಿಸಿರಲಿಲ್ಲ. ಆದರೆ, ಈಗೀಗ ಅಲ್ಲೂ ಕೊರೊನಾ ವೇಗವಾಗಿ ವ್ಯಾಪಿಸುತ್ತಿದ್ದು, ಜನರು ಸಂಕಷ್ಟಕ್ಕೀಡಾಗುವಂತೆ ಮಾಡಿದೆ.