ಹೈದರಾಬಾದ್: ಕೊರೊನಾ ಪಿಡುಗಿನ ಫಲಶ್ರುತಿ ಎಂಬಂತೆ ಜಾಗತಿಕ ಆರ್ಥಿಕತೆಯು ಡಾಲರ್ 5.8 ಟ್ರಿಲಿಯನ್‌ನಿಂದ ಡಾಲರ್ 8.8 ಟ್ರಿಲಿಯನ್ ನಡುವೆ ನಷ್ಟ ಅನುಭವಿಸಬಹುದು ಎಂದು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ. ಇದು ಪ್ರಪಂಚದ ಒಟ್ಟು ಜಿಡಿಪಿಯ ಶೇಕಡಾ 6.4ರಿಂದ ಶೇಕಡಾ 9.7ಕ್ಕೆ ಸಮವಾಗಿ ಇರಲಿದೆ ಎಂದು ಬ್ಯಾಂಕ್ ಅಂದಾಜಿಸಿದೆ.
ಏಷ್ಯಾ ಮತ್ತು ಪೆಸಿಫಿಕ್ ವಲಯದಲ್ಲಿನ ಆರ್ಥಿಕ ನಷ್ಟವು 3 ತಿಂಗಳ ಅವಧಿಯಲ್ಲಿ ಡಾಲರ್ 1.7 ಟ್ರಿಲಿಯನ್ ಡಾಲರ್ನಷ್ಟು ಹಾಗೂ 6 ತಿಂಗಳ ಅವಧಿಯಲ್ಲಿ 2.5 ಟ್ರಿಲಿಯನ್ ಡಾಲರ್ನಷ್ಟು ಇರಬಹುದು ಎಂದು ವರದಿ ಹೇಳಿದೆ.
ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ 1.1 ಅಥವಾ 1.6 ಟ್ರಿಲಿಯನ್ ಡಾಲರ್ ನಡುವೆ ನಷ್ಟ ಅನುಭವಿಸಬಹುದು ಎಂದು ವರದಿ ಹೇಳಿದೆ. ಏಪ್ರಿಲ್ 3ರಂದು ಪ್ರಕಟವಾದ ಏಷ್ಯನ್ ಡೆವಲಪ್‌ಮೆಂಟ್ ಔಟ್‌ಲುಕ್ 2020ರಲ್ಲಿ ಈ ಅಂಕಿ ಅಂಶಗಳನ್ನು ಪ್ರಕಟಿಸಲಾಗಿದೆ. ಈ ಅಂಕಿ ಅಂಶದ ಪ್ರಕಾರವೇ ಕೊರೊನಾಗೆ ಮಾಡುತ್ತಿರುವ ವೆಚ್ಚ 2 ಟ್ರಿಲಿಯನ್ ಡಾಲರ್ನಿಂದ 4.1 ಟ್ರಿಲಿಯನ್ ಡಾಲರ್ ನಡುವೆ ಇರಲಿದೆ.
ಸಾಂಕ್ರಾಮಿಕ ರೋಗ ತಂದೊಡ್ಡಿರುವ ಪರಿಣಾಮಗಳನ್ನು ಬಹುತೇಕ ದೇಶಗಳು ಎದುರಿಸುತ್ತಿದ್ದು, ಹಣದ ಹರಿವನ್ನು ಸರಾಗಗೊಳಿಸುವುದು, ಹೆಚ್ಚಿದ ಆರೋಗ್ಯ ವೆಚ್ಚ, ಆದಾಯ ಮತ್ತು ತೆರಿಗೆ ನಷ್ಟ ಸರಿದೂಗಿಸಲು ನೇರ ಬೆಂಬಲ ಮುಂತಾದ ಕ್ರಮಗಳನ್ನು ಜಾರಿಗೆ ತರುತ್ತಿವೆ ಎಂದು ಎಡಿಬಿ ಹೇಳಿದೆ.
"ಈ ಹೊಸ ವಿಶ್ಲೇಷಣೆಯು ಕೋವಿಡ್ - 19 ಸೃಷ್ಟಿಸಿರುವ ಅತಿ ಮಹತ್ವದ ಸಂಭಾವ್ಯ ಆರ್ಥಿಕ ಪ್ರಭಾವದ ವಿಶಾಲ ಚಿತ್ರಣ ನೀಡುತ್ತದೆ" ಎಂದು ಎಡಿಬಿ ಮುಖ್ಯ ಅರ್ಥಶಾಸ್ತ್ರಜ್ಞರಾದ ಯಸುಯುಕಿ ಸಾವಡಾ ಹೇಳಿದ್ದಾರೆ.
"ಆರ್ಥಿಕತೆಗೆ ಉಂಟಾದ ಹಾನಿ ತಗ್ಗಿಸಲು ಸಹಾಯ ಮಾಡುವಂತಹ ನೀತಿ ನಿರೂಪಣೆಗಳು ವಹಿಸಬಹುದಾದ ಪ್ರಮುಖ ಪಾತ್ರವನ್ನು ಇದು ತೋರಿಸುತ್ತದೆ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಮತ್ತು ನಿಗ್ರಹಿಸುವ ಕ್ರಮಗಳನ್ನು ರೂಪಿಸುವಾಗ ಮತ್ತು ಕಾರ್ಯಗತಗೊಳಿಸುವಾಗ ಸರ್ಕಾರಗಳಿಗೆ ಸಂಬಂಧಪಟ್ಟ ನೀತಿ ಮಾರ್ಗದರ್ಶಿಯನ್ನು ಈ ಸಂಶೋಧನೆಗಳು ಒದಗಿಸುತ್ತವೆ ಮತ್ತು ಆ ದೇಶಗಳ ಆರ್ಥಿಕತೆ ಮತ್ತು ಜನರ ಮೇಲೆ ಕೋವಿಡ್ ಬಿಕ್ಕಟ್ಟಿನ ಪರಿಣಾಮಗಳನ್ನು ಇವು ತಗ್ಗಿಸುತ್ತವೆ " ಎಂದಿದ್ದಾರೆ.
158 ದಶಲಕ್ಷದಿಂದ 242 ದಶಲಕ್ಷದವರೆಗೆ ಜಾಗತಿಕ ಉದ್ಯೋಗ ಇಳಿಮುಖವಾಗಲಿದ್ದು, ಇದರಲ್ಲಿ ಏಷ್ಯಾ ಮತ್ತು ಪೆಸಿಫಿಕ್ ವಲಯದ ಪಾಲು ಶೇ. 70ರಷ್ಟು ಇರಲಿದೆ. ಪ್ರಪಂಚದ ಎಲ್ಲೆಡೆ ಕಾರ್ಮಿಕ ಆದಾಯವು 1.2 ಟ್ರಿಲಿಯನ್‌ನಿಂದ 1.8 ಟ್ರಿಲಿಯನ್ ಡಾಲರ್‌ಗಳಿಗೆ ಕುಸಿಯಲಿದ್ದು, ಇದರಲ್ಲಿ 359 ಶತಕೋಟಿಯಿಂದ 550 ಶತಕೋಟಿ ಡಾಲರ್‌ಗಳ ನಡುವಿನ ಆರ್ಥಿಕತೆ ಇರುವ ಏಷ್ಯಾ ಪೆಸಿಫಿಕ್ ದೇಶಗಳಲ್ಲಿ ಶೇ 30ರಷ್ಟು ಕುಸಿತ ಉಂಟಾಗಲಿದೆ.
ಆರೋಗ್ಯ ಸಂಬಂಧಿ ವೆಚ್ಚ ಹೆಚ್ಚಳ ಮತ್ತು ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವುದರ ಜೊತೆಗೆ, ದೀರ್ಘಕಾಲದ ಆರ್ಥಿಕ ಚೇತರಿಕೆಗೆ ಆದಾಯ ಮತ್ತು ಉದ್ಯೋಗ ಭದ್ರತೆಯ ಅಗತ್ಯ ಇದೆ.
ಬಳಕೆಯ ಕ್ಷಿಪ್ರಗತಿಯ ಕುಸಿತ ತಡೆಯಲು ಸರ್ಕಾರಗಳು ಪೂರೈಕೆ ಸರಪಳಿ ಅಡೆತಡೆಗಳನ್ನು ನಿರ್ವಹಿಸಬೇಕು. ಸರಕು ಮತ್ತು ಸೇವೆಗಳ ವಿತರಣೆಗೆ ಇ-ಕಾಮರ್ಸ್ ಮತ್ತು ಸರಕು ಸಾಗಣೆ ವ್ಯವಸ್ಥೆಯನ್ನು ಬೆಂಬಲಿಬೇಕು ಮತ್ತು ತಾತ್ಕಾಲಿಕ ಸಾಮಾಜಿಕ ಭದ್ರತೆ ಕ್ರಮಗಳು, ನಿರುದ್ಯೋಗ ಸಬ್ಸಿಡಿ, ವಿಶೇಷವಾಗಿ ಆಹಾರ ಒಳಗೊಂಡಂತೆ ಅಗತ್ಯ ವಸ್ತುಗಳ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುತ್ತದೆ ವರದಿ.
ಕೋವಿಡ್ 19ರ ಪರಿಣಾಮಗಳನ್ನು ಎದುರಿಸಲು ಶ್ರಮಿಸುತ್ತಿರುವ ತನ್ನ ಸದಸ್ಯ ದೇಶಗಳಿಗೆ ಏಪ್ರಿಲ್ 13 ರಂದು 20 ಶತಕೋಟಿ ಡಾಲರ್ ನೆರವಿನ ಪ್ಯಾಕೇಜ್ ನೀಡಿದೆ.