ನವದೆಹಲಿ: ದುಬೈನಿಂದ ರವಾನೆಯಾಗಿದ್ದ ಭಾರತೀಯನ ಮೃತದೇಹವನ್ನು ಪಡೆದುಕೊಳ್ಳಲು ವಿದೆಶಾಂಗ ಇಲಾಖೆಯ ಅನುಮತಿ ಪತ್ರ ಇದ್ದರೂ 23 ವರ್ಷದ ಕಮಲೇಶ್ ಭಟ್ ದೇಹವನ್ನು ದುಬೈಗೆ ವಾಪಸ್ ಕಳಿಸಿದ್ದ ವಿಚಾರ ಕುರಿತು ದೆಹಲಿ ಉಚ್ಚನ್ಯಾಯಾಲವು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
'ಅಗತ್ಯವಾದ ಅನುಮತಿ ಇದ್ದರೂ ಸಹ, ದೆಹಲಿಯಲ್ಲಿ ಮೃತದೇಹ ಇಳಿಸಲು ಸಂಬಂಧಪಟ್ಟ ಅಧಿಕಾರಿಗಳು ಅನುಮತಿ ನೀಡಲಿಲ್ಲ. ಅವರನ್ನು ಮತ್ತೆ ಅದೇ ವಿಮಾನದಲ್ಲಿ ವಾಪಸ್ ಕಳುಹಿಸಲಾಯಿತು' ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೀಡಿದ ನೋಟಿಸ್ನಲ್ಲಿ ತಿಳಿಸಿದೆ.
ಮೃತದೇಹವನ್ನು ವಾಪಸ್ ಕಳಿಸಿದ ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ಮೃತನ ಸಂಬಂಧಿಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ನವದೆಹಲಿಯಿಂದ ಅಬುಧಾಬಿಗೆ ಮೃತದೇಹ ಹಿಂದಿರುಗಿಸಿದ ನಂತರ ಕಮಲೇಶ್ ಭಟ್ ಅವರ ಮೃತದೇಹದ ಪ್ರಸ್ತುತ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲವೆಂದು ಕುಟುಂಬಸ್ಥರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಈ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರತಿಕ್ರಿಯಿಸಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಣಿಂದರ್ ಆಚಾರ್ಯ, ಭಾರತದಿಂದ ಹಿಂದುರಿಗಿಸಲ್ಪಟ್ಟ ಕಮಲೇಶ್ ಭಟ್ ಅವರ ಮೃತದೇಹ ಇರುವ ಸ್ಥಳ ಮತ್ತು ಸ್ಥಿತಿಯ ಬಗ್ಗೆ ಸಂಬಂಧಪಟ್ಟ ರಾಯಭಾರ ಕಚೇರಿಯಿಂದ ಸರ್ಕಾರ ಮಾಹಿತಿ ಪಡೆಯಲಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರದ ವಿವಿಧ ಸಚಿವಾಲಯ ಮತ್ತು ಅಧಿಕಾರಿಗಳ ಸಮನ್ವಯದ ಕೊರತೆಯಿಂದಾಗಿ ಕಮಲೇಶ್ ಭಟ್ ಅವರ ಪೋಷಕರು ತಮ್ಮ ಪದ್ಧತಿ ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿ ಮಗನ ಅಂತಿಮ ವಿಧಿಗಳನ್ನು ನೆರವೇರಿಸುವುದರಿಂದ ವಂಚಿತರಾದ ಕಾರಣ ರಜಾ ದಿನಗಳಲ್ಲೂ ಈ ವಿಷಯವನ್ನು ಕೈಗೆತ್ತಿಕೊಳ್ಳಲು ಹೈಕೋರ್ಟ್ ನಿರ್ಧರಿಸಿತು.
ಹೆಚ್ಚುವರಿ ಸಾಲಿಸಿಟರ್ ಜನರಲ್ ಮಣಿಂದರ್ ಆಚಾರ್ಯ ಅವರು ಈ ವಿಷಯವನ್ನು ಭಾರತ ಸರ್ಕಾರದಲ್ಲಿ ಉನ್ನತ ಮಟ್ಟದಲ್ಲಿ ಚರ್ಚಿಸಲಾಗಿದೆ. ಇತರ ಕುಟುಂಬಗಳು ಮುಂದಿನ ದಿನಗಳಲ್ಲಿ ಇಂತ ಸಮಸ್ಯೆ ಎದುರಿಸಬೇಕಾಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಪ್ರಕರಣ ಸಂಬಂಧ ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.