ಡೆಹರಾಡೂನ್ (ಉತ್ತರಾಖಂಡ್): ಕೊರೊನಾ ವೈರಸ್ ನಿಯಂತ್ರಿಸುವ ಸಲುವಾಗಿ ದೇಶದ ವಿವಿಧ ಭಾಗಗಳ 75 ನಗರಗಳಿಂದ ಬರುವವರಿಗೆ ಕ್ವಾರಂಟೈನ್ ಅವಧಿಯನ್ನು 21 ದಿನಗಳವರೆಗೆ ವಿಸ್ತರಿಸಲಾಗಿದೆ ಎಂದು ಉತ್ತರಾಖಂಡ್ ಸರ್ಕಾರ ತಿಳಿಸಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಉತ್ತಪಾಲ್ ಕುಮಾರ್ ಸಿಂಗ್ ಈ ಆದೇಶ ಹೊರಡಿಸಿದ್ದು, ಈ ಹಿಂದೆ ಅನ್ಯರಾಜ್ಯದಿಂದ ಬಂದವರಿಗೆ ಒಂದು ವಾರಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರಿಸಲಾಗುತ್ತಿತ್ತು. ಆದರೆ ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಈ ಕಾಲಾವಧಿಯನ್ನು 21 ದಿನಗಳವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿನ ಇತರ ನಗರಗಳಾದ ದೆಹಲಿ, ನೋಯ್ಡಾ, ಆಗ್ರಾ, ಲಕ್ನೋ, ಮೀರತ್, ವಾರಣಾಸಿ, ಚೆನ್ನೈ ಮತ್ತು ಹೈದರಾಬಾದ್ ಸೇರಿದಂತೆ ಒಟ್ಟು 75 ವಿವಿಧ ನಗರಗಳಿಂದ ಬರುವ ಪ್ರಯಾಣಿಕರಿಗೆ 21 ದಿನಗಳ ಕ್ವಾರಂಟೈನ್ ಕಡ್ಡಾಯ ಎಂದು ಸರ್ಕಾರ ಆದೇಶಿಸಿದೆ.
ಉತ್ತರಾಖಂಡ್ ರಾಜ್ಯದಲ್ಲಿನ ಜನರು ತಮ್ಮ ಜಿಲ್ಲೆಗಳಿಂದ ಹೊರಹೋಗುವ ಮೊದಲು ಸಂಬಂಧಪಟ್ಟ ವೆಬ್‌ಪೋರ್ಟಲ್‌ನಲ್ಲಿ ವೈಯಕ್ತಿಕ ವಿವರಗಳನ್ನು ನೀಡುವುದು ಕಡ್ಡಾಯ ಎಂದು ಇದೇ ವೇಳೆ ಸ್ಪಷ್ಟನೆ ನೀಡಿದೆ.