ವಾಷಿಂಗ್ಟನ್: ಕೊರೊನಾ ಮಹಾಮಾರಿ 2022ರವರೆಗೆ ಮುಂದುವರೆಯುವ ಸಾಧ್ಯತೆ ಇದೆ ಹಾಗೂ ಜನರು ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವವರೆಗೂ ಕೂಡಾ ಕೊರೊನಾವನ್ನು ನಿಯಂತ್ರಣದಲ್ಲಿ ಇಡಲು ಸಾಧ್ಯವಿಲ್ಲ ಎಂದು ತಜ್ಞರು ವರದಿಯೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಮಿನ್ನೆಸೋಟ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಗಳ ಸಂಶೋಧನಾ ಕೇಂದ್ರದ ಸಂಶೋಧಕರು ಈ ಅಭಿಪ್ರಾಯಪಟ್ಟಿದ್ದು, ಕೊರೊನಾ ಮಹಾಮಾರಿಯ ಅವಧಿ ಸುಮಾರು 18 ರಿಂದ 24 ತಿಂಗಳಷ್ಟಿದ್ದು, ಈ ವೇಳೆ, ಹಂತ ಹಂತವಾಗಿ ಜನರು ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ವರದಿಯಲ್ಲಿ ತಿಳಿಸಿದ್ದಾರೆ.
ಜೊತೆಗೆ ಅತಿ ಹೆಚ್ಚು ವೇಗವಾಗಿ ಹರಡುವ ಗುಣ ಹೊಂದಿರುವ ಈ ಸೋಂಕು ಸುಮಾರು ಎರಡು ವರ್ಷಗಳ ಕಾಲ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಇರುತ್ತದೆ. ಜನಸಂಖ್ಯೆಯ ಶೇಕಡಾ 60ರಿಂದ 70 ರಷ್ಟು ಮಂದಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ತನಕ ಇದು ಹರಡುತ್ತಲೇ ಇರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ಸೋಂಕಿಗೆ ಲಸಿಕೆ ಹಾಗೂ ಜನರಲ್ಲಿ ರೋಗ ನಿರೋಧಕ ಶಕ್ತಿ ಇಲ್ಲದಿರುವ ಕಾರಣದಿಂದ ಅಮೆರಿಕ ಕ್ಲಿಷ್ಟ ಪರಿಸ್ಥಿತಿಯನ್ನು ಅನುಭವಿಸುತ್ತಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೊರೊನಾ ಮಹಾಮಾರಿ ಕಡಿಮೆಯಾಗುವುದು ಸುಲಭವಲ್ಲ, ಇದನ್ನು ಎರಡು ವರ್ಷದವರೆಗೆ ಎದುರಿಸಲು ಸರ್ಕಾರಗಳು ಸಿದ್ಧತೆ ನಡೆಸಬೇಕೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿಶ್ವದಲ್ಲಿ ಈಗಾಗಲೇ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಸಾಮಾಜಿಕ ಅಂತರದ ನಿಯಮವನ್ನು ಉಲ್ಲಂಘಿಸುವುದು ಕೊರೊನಾ ವೇಗವಾಗಿ ಹರಡಲು ಕಾರಣವಾಗುತ್ತದೆ ಎಂದು ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.