ನವದೆಹಲಿ: ಜಾಗತಿಕವಾಗಿ ಕೊರೊನಾ ವೈರಸ್ ಸಾವಿನ ಕೇಕೆ ಹೊಡೆಯುತ್ತಿದೆ. ಅಮೆರಿಕಾ, ಇಟಲಿ, ಸ್ಪೇನ್ ದೇಶಗಳು ಕೊರೊನಾದಿಂದ ದೊಡ್ಡ ಮಟ್ಟಕ್ಕೆ ತತ್ತರಿಸಿವೆ. ಫ್ರಾನ್ಸ್, ಬ್ರಿಟನ್ನಲ್ಲೂ ಅದೇ ರೀತಿ ಕಾಣಿಸಿಕೊಂಡಿದೆ. ಜಗತ್ತಿನಲ್ಲಿ ಸಾವಿನ ವರದಿಗಳು ಕಡಿಮೆಯಾಗುವ ಲಕ್ಷಣಗಳೇ ಗೋಚಿಸುತ್ತಿಲ್ಲ.
ಕಳೆದ 24 ಗಂಟೆಯಲ್ಲಿ 7,065 ಮಂದಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 63,832 ಕ್ಕೆ ಏರಿದೆ. ಏಪ್ರಿಲ್ 2ರಂದು 50,320 ಮಂದಿ, ನಿನ್ನೆಗೆ ಅದು 56,767ಕ್ಕೆ ಏರಿಕೆ ಕಂಡಿತ್ತು. ಸೋಂಕಿತರ ಸಂಖ್ಯೆಯೂ ವಿಶ್ವದಲ್ಲಿ 11,59,515ಕ್ಕೆ ಏರಿದೆ. ಇಷ್ಟರಲ್ಲಿ 2,37,436 ಮಂದಿ ಮಾತ್ರ ಗುಣಮುಖರಾಗಿದ್ದಾರೆ. ಟರ್ಕಿಯಲ್ಲಿ ಇಂದು 500, ಫ್ರಾನ್ಸ್ನಲ್ಲಿ 441 ಮಂದಿ ಹೊಸದಾಗಿ ಮೃತಪಟ್ಟಿದ್ದಾರೆ.
ಭಾರತದಲ್ಲೂ ಸಹ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿವೆ. ಇಂದು 13 ಮಂದಿ ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 86ಕ್ಕೆ ಏರಿಕೆಯಾಗಿದೆ. ಇಂದು ದೇಶದಲ್ಲಿ 324 ಹೊಸ ಪ್ರಕರಣಗಳ ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಹೆಚ್ಚು (635) ಮಂದಿಗೆ ಸೋಂಕಿತರನ್ನು ಹೊಂದಿದ ಮೊದಲ ರಾಜ್ಯವಾಗಿದೆ. ದೇಶಾದ್ಯಂತ ಸೋಂಕಿತರ ಸಂಖ್ಯೆ 3,082ಕ್ಕೆ ಏರಿದೆ. ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 144ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ 16 ಮಂದಿಯಲ್ಲಿ ಸೋಂಕು ಪತ್ತೆಯಾಗಿವೆ.