ನವದೆಹಲಿ: ದೇಶದಲ್ಲಿ ಇಂದು ಸಂಜೆ ವೇಳೆಗೆ ಕೋವಿಡ್-19 ಸೋಂಕಿತರ ಸಂಖ್ಯೆ 11 ಸಾವಿರದ 933ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ 392ಕ್ಕೆ ತಲುಪಿದೆ. ಇದರಲ್ಲಿ 10 ಸಾವಿರದ 197 ಆ್ಯಕ್ಟೀವ್ ಪ್ರಕರಣಗಳಾಗಿದ್ರೆ, 1 ಸಾವಿರದ 344 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಜನವರಿ 7 ರಂದು ಚೀನಾದಲ್ಲಿ ಕೊರೊನಾ ವೈರಸ್ ಪ್ರಕರಣ ಪತ್ತೆಯಾದ ಕೂಡಲೇ ಸ್ಪಂದಿಸಿದ ಮೊದಲ ದೇಶ ಭಾರತವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಚೀನಾದಲ್ಲಿ 2020ರ ಜನವರಿ 7 ರಂದು ಮೊದಲ ಪ್ರಕರಣ ಪತ್ತೆಯಾಗಿತ್ತು. ಈ ಸಂಬಂಧ ನಾವು ಜನವರಿ 8 ರಂದೇ ಕಾರ್ಯಪ್ರವೃತ್ತರಾದೆವು. ಜ.17 ರಂದು ತಜ್ಞರ ತಂಡದೊಂದಿಗೆ ಸಭೆ ನಡೆಸಿದ ಬಳಿಕ ಆರೋಗ್ಯ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿರುವುದಾಗಿ ಸಚಿವರು ವಿವರಿಸಿದ್ದಾರೆ.