ಬೆಂಗಳೂರು: ಕೊರೊನಾ ಸೋಂಕು ಎಲ್ಲೆಡೆ ತನ್ನ ಕಬಂದ ಬಾಹುಗಳನ್ನು ಚಾಚುತ್ತಿದೆ. ರಾಜ್ಯದ ಬಹುತೇಕ ದೇವಾಲಯಗಳಿಗೆ ಕೊರೊನಾ ಸೋಂಕಿನ ಭೀತಿ ತಗುಲಿದೆ. ಸಾಕಷ್ಟು ದೇವಾಲಯಗಳಲ್ಲಿ ಹಲವಾರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹಾಸನದಲ್ಲಿರುವ ವಿಶ್ವವಿಖ್ಯಾತ ಬೇಲೂರು, ಹಳೆಬೀಡು ಹಾಗೂ ಶ್ರವಣ ಬೆಳಗೊಳಕ್ಕೆ ಮಾರ್ಚ್ 31ರವರೆಗೆ ಪ್ರವೇಶ ಇಲ್ಲ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಇದೇ ತಿಂಗಳ ಕೊನೆಯಲ್ಲಿ ನಡೆಯುವ ಚೆನ್ನಕೇಶವ ಜಾತ್ರೆ ಹಾಗೂ ರಥೋತ್ಸವಕ್ಕೂ ಬ್ರೇಕ್ ಬೀಳುವ ಸಾಧ್ಯತೆಗಳು ನಿಚ್ಚಳವಾಗಿದೆ.
ಬೆಳಗಾವಿಯ ಸವದತ್ತಿ ಯಲ್ಲಮ್ಮ ಸನ್ನಿಧಾನಕ್ಕೆ ಬರುವ ಭಕ್ತರಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇವಸ್ಥಾನ ಆಡಳಿತ ಮಂಡಳಿ ವಿಶೇಷ ವೈದ್ಯಕೀಯ ತಂಡವನ್ನು ರಚನೆ ಮಾಡಿದ್ದು, ಭಕ್ತರ ಮೇಲೆ ತೀವ್ರ ನಿಗಾ ಇಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಧಾರ್ಮಿಕ ಕ್ಷೇತ್ರಗಳ ಸೇವೆಗಳನ್ನು ಸ್ಥಗಿತಗೊಳಿಸೋದಾಗಿ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಆದೇಶ ನೀಡಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೂ ಕೂಡಾ ಸೋಂಕಿನ ಭೀತಿ ಕಾಡಿದೆ. ಇಂದು ನಡೆದ ರಥೋತ್ಸವವನ್ನು ತುಂಬಾ ಸರಳವಾಗಿ ಆಚರಣೆ ಮಾಡಲಾಗಿದ್ದು ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ಬೆಂಗಳೂರಿನ ಪ್ರಸಿದ್ಧ ಇಸ್ಕಾನ್ ದೇವಾಲಯಕ್ಕೂ ಕೂಡಾ ಕೊರೊನಾ ಭೀತಿ ಆವರಿಸಿದೆ. ನಾಳೆಯಿಂದ ದೇವಸ್ಥಾನದ ಬಾಗಿಲು ತೆರೆಯದೇ ಇರೋದಕ್ಕೆ ದೇವಾಲಯದ ಆಡಳಿತ ಮಂಡಳಿ ನಿರ್ಧರಿಸಿದೆ. ನಾಡದೇವಿ ಚಾಮುಂಡೇಶ್ವರಿಗೂ ಕೊರೊನಾ ಎಫೆಕ್ಟ್ನ ಬಿಸಿ ತಟ್ಟಿದೆ. ಮೈಸೂರಿನಲ್ಲಿ ತೀವ್ರ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಜನ ಗುಂಪು ಸೇರೋದನ್ನು ಕೂಡಾ ನಿಷೇಧ ಮಾಡಲಾಗಿದೆ. ಇದರಿಂದಾಗಿ ಚಾಮುಂಡೇಶ್ವರಿ ದೇವಾಲಯ ಭಕ್ತರಿಲ್ಲದೆ ಬಿಕೋ ಅಂತಿದೆ.
ಕೊರೊನಾ ವೈರಸ್ನ ಹಾವಳಿ ತಡೆಯುವಂತೆ ದೇವರಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರಾರ್ಥನೆ ಸಲ್ಲಿಸಿದ್ದಾರೆ. ಮಡಿಕೇರಿಯ ಚೌಡೇಶ್ವರಿ ದೇವಾಲಯದಲ್ಲಿ ಜೆಡಿಎಸ್ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿ ಅರ್ಚನೆ ಮಾಡಿದ್ದಾರೆ. ಜೊತೆಗೆ ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ದೇವರಲ್ಲಿ ಬೇಡಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೊರೊನಾ ಮಹಾಮಾರಿ ನಾಶವಾಗಲಿ ಎಂದು ಮಾರಿಕಾಂಬೆ ದೇಗುಲದಲ್ಲಿ ಈಡುಗಾಯಿ ಒಡೆದು ಹರಕೆ ಹೊತ್ತರು. ಸಾಗರದ ಧನಂಜಯ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗಿದೆ.