ನವದೆಹಲಿ: ದೇಶದಲ್ಲಿ ಕೊರೊನಾ ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇವಲ ಒಂದೊಂದು ದಿನದ ಅಂತರದಲ್ಲಿ ಸಾವಿರಾರು ಮಂದಿಯಲ್ಲಿ ಸೋಂಕು ಪತ್ತೆಯಾಗಿ ಆತಂಕ ಮೂಡಿಸುತ್ತಿದೆ. ಕೆಲ ದಿನಗಳ ಹಿಂದಿನ ಹಾಗೂ ಈಗಿನ ಸೋಂಕಿತರ ಪ್ರಮಾಣದಲ್ಲಿ ಅಚ್ಚರಿಯ ಹಾಗೂ ಆತಂಕದ ಬೆಳವಣಿಗೆ ಕಾಣಿಸುತ್ತಿದೆ. ಇದರೊಂದಿಗೆ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆಯೂ ಕೂಡಾ ಹೆಚ್ಚಾಗುತ್ತಿದೆ.
ಸೋಂಕಿತರ ಪ್ರಮಾಣದಲ್ಲಿ ವಿಶ್ವದಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿರುವ ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 22,752 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ 482 ಮಂದಿ ಸೋಂಕಿತರು ಕೊರೊನಾಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 7,42,417ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ 20,642ಕ್ಕೆ ಏರಿಕೆಯಾಗಿದೆ.
ಒಟ್ಟು ಸೋಂಕಿತರ ಪೈಕಿ 4,56,831 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ. ಉಳಿದಂತೆ 2,64,944 ಮಂದಿಗೆ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ದೇಶದಲ್ಲಿ ಸೋಂಕು ಪತ್ತೆ ಪರೀಕ್ಷೆಯೂ ವೇಗವಾಗಿ ನಡೆಯುತ್ತಿದೆ. ಇಂದಿನವರೆಗೆ ಒಟ್ಟು 1,04,73,771 (1.04ಕೋಟಿ) ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ. ನಿನ್ನೆ ಒಂದೇ ದಿನದಲ್ಲಿ 2,62,679 ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ರಿಸರ್ಚ್ ಮಾಹಿತಿ ನೀಡಿದೆ.