ಕೋಲ್ಕತ್ತಾ: ದೇಶದಲ್ಲಿ ಕೊರೊನಾ ವಿರುದ್ಧದ ಹೋರಾಟ ಮುಂದುವರಿದಿದ್ದು, ಈಗಾಗಲೇ ಲಾಕ್ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಇದರಿಂದ ವಲಸೆ ಕಾರ್ಮಿಕರ ಆಕ್ರೋಶದ ಕಟ್ಟೆಯೊಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಮಧ್ಯೆ ಪೊಲೀಸರ ಮೇಲೆ ಕ್ವಾರಂಟೈನ್ ಸೆಂಟರ್ ವಿಚಾರವಾಗಿ ಗ್ರಾಮಸ್ಥರು ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಕಳೆದೆರೆಡು ದಿನಗಳ ಹಿಂದೆ ಚುರುಲಿ ಗ್ರಾಮದ ಪಕ್ಕದಲ್ಲಿರುವ ಹಾಸ್ಟೇಲ್ನಲ್ಲಿ ಕೊರೊನಾ ಶಂಕಿತ ವ್ಯಕ್ತಿಗಳು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಇದೇ ವಿಷಯವಾಗಿ ಪಕ್ಕದ ಗ್ರಾಮಸ್ಥರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ.
ಕ್ವಾರಂಟೈನ್ ಸೆಂಟರ್ ಬೇರೆ ಸ್ಥಳಕ್ಕೆ ವರ್ಗಾಯಿಸುವಂತೆ ಅವರು ಪಟ್ಟು ಹಿಡಿದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಓರ್ವ ಹಿರಿಯ ಪೊಲೀಸ್ ಅಧಿಕಾರಿ ಸೇರಿದಂತೆ 20 ಪೊಲೀಸ್ ಪೇದೆಗಳ ಮೇಲೆ ಹಲ್ಲೆ ನಡೆಸಿದ್ದು, ಅವರು ಗಾಯಗೊಂಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಅನೇಕ ಕಡೆ ಜನರು ಕ್ವಾರಂಟೈನ್ ಸೆಂಟರ್ ನಿರ್ಮಾಣಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿದ್ದು, ಅವರಿಗೆ ಬೇರೆ ಪ್ರದೇಶಗಳಲ್ಲಿ ಸ್ಥಳ ನೀಡಬೇಕು ಎಂಬ ಕೂಗು ಗಂಭೀರವಾಗಿ ಕೇಳಿ ಬರುತ್ತಿದೆ.