ನವದೆಹಲಿ: 3 ಕೃಷಿ ಕಾನೂನುಗಳನ್ನು ವಿರೋಧಿಸಿ ಅನ್ನದಾತರ ಹೋರಾಟ ಮುಂದುವರೆದಿದೆ. ಈ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಷ್ಟ್ರ ರಾಜಧಾನಿಯ ರಾಜ್ಯಪಾಲರ ಭವನಕ್ಕೆ ಘೇರಾವ್ ಹಾಕುವ ನಿಟ್ಟಿನಲ್ಲಿ ಇಂದು ಮೆರವಣಿಗೆ ನಡೆಸಲು ಸಜ್ಜಾಗಿದ್ದಾರೆ.
ಕಾಂಗ್ರೆಸ್ ಪಕ್ಷವು ಇಂದು 'ಕಿಸಾನ್ ಅಧಿಕಾರ ದಿವಸ್' ಆಚರಿಸುತ್ತಿದ್ದು, ಎಲ್ಲಾ ರಾಜ್ಯಗಳಲ್ಲಿನ ರಾಜ್ ಭವನಗಳಿಗೆ ಘೇರಾವ್ ಹಾಕಲು ಪಕ್ಷ ಸಜ್ಜಾಗಿದೆ.
ಈ ಸುದ್ದಿಯನ್ನೂ ಓದಿ: ರೈತರು ಪ್ರಬಲ ಶಕ್ತಿಗಳ ವಿರುದ್ಧ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ: ರಾಹುಲ್ ಗಾಂಧಿ
ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ನಡೆಸಲಿರುವ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಇತರ ಹಿರಿಯ ಪಕ್ಷದ ಮುಖಂಡರು ಭಾಗಿಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ಖಾಸಗಿ ಸುದ್ದಿಸಂಸ್ಥೆಯೊಂದಕ್ಕೆ ಮಾಹಿತಿ ನೀಡಿವೆ. ಮೆರವಣಿಗೆ ಎಲ್ಜಿ ಹೌಸ್ ಕಡೆಗೆ ಸಾಗಲಿದೆ. ರಾಹುಲ್ ಗಾಂಧಿ ಮತ್ತು ಪಕ್ಷದ ಇತರ ಹಿರಿಯ ಮುಖಂಡರು ಮೆರವಣಿಗೆಯನ್ನು ಮುನ್ನಡೆಸಲಿದ್ದಾರೆ.
ಅನ್ನದಾತರು ವಿರೋಧಿಸುತ್ತಿರುವ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತಲೇ ಇದೆ. ಇದೀಗ ಪ್ರಕರಣ ಸುಪ್ರೀಂಕೋರ್ಟ್ ಅಂಗಳದಲ್ಲಿದ್ದು, ಸಮಸ್ಯೆ ಬಗೆಹರಿಸಲು ಸಮಿತಿ ಸಹ ರಚನೆ ಆಗಿದೆ.
ಈ ನಡುವೆ ಮುಂದಿನ ಆದೇಶದವರೆಗೂ ಸುಪ್ರೀಂಕೋರ್ಟ್ ಕೇಂದ್ರ ಜಾರಿಗೆ ತಂದಿರುವ ಮೂರೂ ಕೃಷಿ ಕಾಯ್ದೆಗಳಿಗೆ ತಡೆಯಾಜ್ಞೆ ನೀಡಿದೆ. ಮತ್ತೊಂದು ಕಡೆ ಈ ಆದೇಶದ ವಿರುದ್ಧ ಅಪಸ್ವರವೂ ಕೇಳಿ ಬಂದಿದೆ. ರೈತರು ಸಿಂಘು ಗಡಿಯಲ್ಲಿ ತಮ್ಮ ಪ್ರತಿಭಟನೆ ಮುಂದುವರಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ಹೋರಾಟಕ್ಕೆ ಧುಮುಕಿದೆ. ದೇಶಾದ್ಯಂತ ರಾಜಭವನಗಳಿಗೆ ಮುತ್ತಗಿ ಹಾಕಿ ಆಕ್ರೋಶ ವ್ಯಕ್ತಪಡಿಸಲು ಗ್ರ್ಯಾಂಡ್ ಓಲ್ಡ್ ಪಾರ್ಟಿ ಮುಂದಾಗಿದೆ.