ನವದೆಹಲಿ: ಸಂಸತ್ತಿನ ಮಾನ್ಸೂನ್ ಅಧಿವೇಶನ ಶುರುವಾಗುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಭೆಯ ನಂತರ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ತಂತ್ರಗಾರಿಕೆ ಸಭೆ ನಡೆಯಲಿದೆ.
ಅಧಿವೇಶನದಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆ ಮಾತುಕತೆ ನಡೆಯಲಿದ್ದು, ಈ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಗುಲಾಮ್ ನಬಿ ಆಜಾದ್, ಆನಂದ್ ಸಿಂಗ್ ಭಾಗಿಯಾಗಲಿದ್ದಾರೆ. ಈ ಇಬ್ಬರೂ ನಾಯಕರು ಕಾಂಗ್ರೆಸ್ನಲ್ಲಿ ಪ್ರಬಲವಾದ ನಾಯಕತ್ವ ಬೇಕೆಂದು ಒತ್ತಾಯಿಸಿ ಪತ್ರಕ್ಕೆ ಸಹಿ ಮಾಡಿದ್ದರು.
ಈ ಸಭೆಯಲ್ಲಿ ಪ್ರಧಾನಿ ಮೋದಿ ಸರ್ಕಾರದ ಮೇಲೆ ದಾಳಿ ನಡೆಸಲು ಬೇಕಾದ ತಂತ್ರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇದರ ಜೊತೆಗೆ ಪ್ರಶ್ನೋತ್ತರ ಅವಧಿಯನ್ನು ರದ್ದು ಮಾಡಿರುವುದು ಕೂಡ ಅತಿ ಮುಖ್ಯ ವಿಷಯವಾಗಲಿದೆ.
ಇದಕ್ಕೂ ಮೊದಲು ಸೋನಿಯಾ ಗಾಂಧಿ ಗೈರು ಹಾಜರಿ ನಡುವೆ ಅಧಿವೇಶನ ಸಂಬಂಧ ಕಾಯತಂತ್ರ ಸಭೆ ನಡೆದಿತ್ತು. ಈ ವೇಳೆ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಲಾಕ್ಡೌನ್ ನಂತರ ಮಾನ್ಸೂನ್ ಅಧಿವೇಶನ ನಡೆಯುತ್ತಿರುವುದು ವಿಶೇಷ. ಪ್ರಶ್ನೋತ್ತರ ಅವಧಿಯನ್ನು ರದ್ದುಪಡಿಸಲು ಸರ್ಕಾರ ಸಿದ್ಧವಾಗಿರುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಇದರ ಜೊತೆಗೆ ಪ್ರಶ್ನೋತ್ತರ ಅವಧಿ ಸಂಸತ್ತಿನಲ್ಲಿ ಅತಿ ಮುಖ್ಯವಾಗಿದ್ದು, ಸಂಸದರ ಹಕ್ಕಾಗಿದೆ. ಸರ್ಕಾರವನ್ನು ಪಾರದರ್ಶಕವಾಗಿಡಲು ಇದು ಸಹಕರಿಸುತ್ತದೆ ಎಂದು ಆನಂದ್ ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ಆರೋಪಕ್ಕೆ ಮತ್ತೊಬ್ಬ ನಾಯಕ ಜೈರಾಮ್ ರಮೇಶ್ ದನಿಗೂಡಿಸಿದ್ದಾರೆ.
ಇದೇ ವೇಳೆ ಭಾರತವು ಚೀನಾ ಗಡಿ ವಿಚಾರ ನಿಭಾಯಿಸಲು ವಿಫಲ ಆರೋಪದಲ್ಲಿ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕರು ಕಿಡಿಕಾಡಿದ್ದಾರೆ. ಜಿಡಿಪಿಯಲ್ಲಿ ಭಾರೀ ಇಳಿತವೂ ಕೂಡ ಅಧಿವೇಶದಲ್ಲಿ ಸದ್ದು ಮಾಡಲಿದೆ ಎಂದು ರಾಜಕೀಯ ಪರಿಣಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.