ನವದೆಹಲಿ: ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದ ನಂತರ ಪಕ್ಷ ಪುನಶ್ಚೇತನಗೊಂಡಿದೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
"ಕಾಂಗ್ರೆಸ್ ಪಕ್ಷ ಸಿಂಧಿಯಾಗೆ ಎಲ್ಲವನ್ನೂ ನೀಡಿತ್ತು. ಅಷ್ಟೇ ಅಲ್ಲದೆ ರಾಹುಲ್, ಪ್ರಿಯಾಂಕಾ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದ ಸೋನಿಯಾ ಗಾಂಧಿ ಅವರ ಹತ್ತಿರದವರಲ್ಲಿ ಒಬ್ಬರಾಗಿದ್ದರು. ಆದರೆ ಅವರು ಪಕ್ಷವನ್ನು ತೊರೆದು ಹೋಗುತ್ತಾರೆ ಎಂದು ಭಾವಿಸಿರಲಿಲ್ಲ" ಎಂದು ಸಿಂಗ್ ಹೇಳಿದರು.
ಕೇಂದ್ರ ಮಾಜಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾರ್ಚ್ 11ರಂದು ಕಾಂಗ್ರೆಸ್ ಪಕ್ಷದೊಂದಿಗಿನ ತಮ್ಮ 18 ವರ್ಷಗಳ ಒಡನಾಟವನ್ನು ಕೊನೆಗೊಳಿಸಿ, ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದ್ದರು. ಕಳೆದ ತಿಂಗಳು ಅವರು ರಾಜ್ಯಸಭೆಗೆ ಆಯ್ಕೆಯಾಗಿದರು.
ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಬಿಕ್ಕಟ್ಟು ತಲೆದೋರಿದೆ. ಸಾಂಸ್ಥಿಕ ರಚನೆಯ ಕೂಲಂಕುಷತೆ ಮತ್ತು ನಾಯಕತ್ವದ ಬದಲಾವಣೆ ಬಯಸುವವರ ನಡುವೆ ತೀವ್ರವಾದ ಅಸಮಾಧಾನ ಸ್ಫೋಟಗೊಂಡಿದೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ಇಂದು ನಡೆಯಲಿದ್ದು, ಸೋನಿಯಾ ಗಾಂಧಿ ಪಕ್ಷದ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ಇದೆ. ಇನ್ನುಮುಂದೆ 'ಹಂಗಾಮಿ ಅಧ್ಯಕ್ಷರಾಗಿ' ಮುಂದುವರಿಯಲು ಸಿದ್ಧರಿಲ್ಲ ಎಂದು ಸೋನಿಯಾ ಪಕ್ಷಕ್ಕೆ ತಿಳಿಸಿದ್ದಾರೆ. ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿಯವರ ಅಧಿಕಾರಾವಧಿ ಎರಡು ವಾರಗಳ ಹಿಂದೆಯೇ ಮುಗಿದಾಗಿನಿಂದ ನಾಯಕತ್ವ ಬದಲಾವಣೆಯ ಧ್ವನಿ ಜೋರಾಗಿ ಕೇಳಿ ಬಂದಿದೆ.