ನವದೆಹಲಿ: ಅಕ್ಟೋಬರ್ 21ರಂದು ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ಎಲ್ಲ ಪಕ್ಷಗಳು ಭರದ ತಯಾರಿ ನಡೆಸಿವೆ. ಆದರೆ ಕಾಂಗ್ರೆಸ್ನಲ್ಲಿ ಮಾತ್ರ ರಾಜ್ಯ ಯುವ ಘಟಕ ಹಾಗೂ ಹಳೆ ಮುಖಂಡರ ನಡುವಿನ ಮುಸುಕಿನ ಗುದ್ದಾಟ ಸೋಲಿಗೆ ಕಾರಣವಾಗಬಹುದು ಎಂಬ ಮಾತು ಜೋರಾಗಿ ಕೇಳಿ ಬರುತ್ತಿದೆ.
ತಮ್ಮ ತಮ್ಮಲ್ಲಿನ ಕಾದಾಟ, ಹಳೇ ಮುಖಂಡರ ವಿರುದ್ಧ ಯುವ ನಾಯಕರ ವಾಕ್ಸಮರ ಮುಂದುವರೆದಿರುವ ಕಾರಣ, ಆಡಳಿತ ಪಕ್ಷ ಬಿಜೆಪಿಯನ್ನು ಎದುರಿಸುವ ಸಾಮರ್ಥ್ಯ ನಮ್ಮಲ್ಲಿ ಇಲ್ಲದಂತಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರು ಹೇಳಿರುವ ಬಗ್ಗೆ ಹಿರಿಯ ಪತ್ರಕರ್ತ ಅಮಿತ್ ಅಗ್ನಿಹೋತ್ರಿ ತಿಳಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಂಡಿರುವ ಹೀನಾಯ ಸೋಲಿನಿಂದ ಹೊರಬರಲು ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆ ಅವರಿಗೆ ಉತ್ತಮ ಅವಕಾಶವಾಗಿದೆ ಎಂಬುದು ಅವರ ಅಭಿಪ್ರಾಯ. ಕಾಂಗ್ರೆಸ್ನಲ್ಲಿ ಹೊಂದಾಣಿಕೆ ಇಲ್ಲದ ಕಾರಣ, ಹರಿಯಾಣ ಕಾಂಗ್ರೆಸ್ ಘಟಕದ ಮುಖ್ಯಸ್ಥ ಅಶೋಕ್ ತನ್ವಾರ್ ರಾಜೀನಾಮೆ ನೀಡಿರುವುದು ಕೂಡಾ ಕೈ ಪಕ್ಷಕ್ಕೆಗೆ ನುಂಗಲಾರದ ತುತ್ತಾಗಲಿದೆ ಎಂದೇ ವಿಶ್ಲೇಷಿಸಲಾಗ್ತಿದೆ.
ಸದ್ಯ ಹರಿಯಾಣ ಕಾಂಗ್ರೆಸ್ ಘಟಕದ ಮುಖ್ಯಸ್ಥೆ ಕುಮಾರಿ ಸೆಲ್ಜಾ, ದಲಿತ ಮುಖಂಡರಾಗಿರುವ ಭೂಪಿಂದರ್ ಸಿಂಗ್ ಹೂಡಾ ಒಗ್ಗಟ್ಟಿನಿಂದ ಕೆಲ ಸಾರ್ವಜನಿಕ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶೇ.25 ರಷ್ಟು ಜಾಟ್ ಸಮುದಾಯ ಹರಿಯಾಣದಲ್ಲಿದ್ದು, ಹೂಡಾ ಮೇಲೆ ಇವರ ಒಲವು ಹೆಚ್ಚಾಗಿರುವುದರಿಂದ ಪಕ್ಷಕ್ಕೆ ವರದಾನವಾಗಬಹುದು. ಆದರೆ ಇದರ ಸರಿಯಾದ ಪ್ರಯೋಜನವನ್ನು ಪಕ್ಷ ಇದೀಗ ಪಡೆದುಕೊಳ್ಳಬೇಕು.
ಮಹಾರಾಷ್ಟ್ರದ ಚಿತ್ರಣ:
ಮಹಾರಾಷ್ಟ್ರದಲ್ಲೂ ಹಿರಿಯ ನಾಯಕ ರಾಧಾಕೃಷ್ಣ ವಿಖ್ ಪಾಟೀಲ್ ಕೆಲ ತಿಂಗಳ ಹಿಂದೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಹಾಗೂ ಬಿಜೆಪಿ-ಶಿವಸೇನೆ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಮಾರಕವಾಗಬಹುದು.
2014ರಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ 48 ಸ್ಥಾನಗಳಲ್ಲಿ 2 ಹಾಗೂ 2019ರಲ್ಲಿ ಕೇವಲ ಒಂದು ಸ್ಥಾನದಲ್ಲಿ ಗೆಲುವು ದಾಖಲಿಸಿತ್ತು. ಈ ಫಲಿತಾಂಶ ಗಮನದಲ್ಲಿಟ್ಟುಕೊಂಡು ರಾಜ್ಯಾದ್ಯಂತ ಪಕ್ಷ ತನ್ನ ಹೆಜ್ಜೆಗುರುತು ಗಟ್ಟಿ ಮಾಡಿಕೊಳ್ಳಬೇಕಾಗಿದೆ. ಇದರ ಮಧ್ಯೆ ವಿಧಾನಸಭೆ ಚುನಾವಣೆಗೆ ಟಿಕೆಟ್ ವಿತರಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಕಾಂಗ್ರೆಸ್ನಲ್ಲಿ ಅನುಭವಿ ಹಾಗೂ ಯುವ ಮುಖಂಡರ ನಡುವಿನ ಜಗಳದಿಂದಾಗಿ ರಾಹುಲ್ ಗಾಂಧಿ ಸಹ ಪ್ರತಿರೋಧ ಎದುರಿಸಬೇಕಾಯಿತು.
2019ರ ಲೋಕಸಭಾ ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಅಮೂಲಾಗ್ರ ಬದಲಾವಣೆಯಾಗುತ್ತಿವೆ ಎಂದು ರಾಹುಲ್ ಗಾಂಧಿ ಎಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದು ಸಹ ಪಕ್ಷದಲ್ಲಿನ ಒಳಜಗಳಕ್ಕೆ ಕಾರಣವಾಗಿದೆ ಎಂದು ಹಿರಿಯ ಪತ್ರಕರ್ತ ತಿಳಿಸಿದ್ದಾರೆ.