ನವದೆಹಲಿ: ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿರುವ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷ ಮೊದಲಿನಂತೆ ಇಲ್ಲ. ವಾಸ್ತವದಿಂದ ಬಲು ದೂರವಿದೆ ಎಂದು ಟೀಕಿಸಿದ್ದಾರೆ.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ಜೆ ಪಿ ನಡ್ಡಾ ಅವರ ಸಮ್ಮುಖದಲ್ಲಿ ಕಮಲ ಪಕ್ಷ ಸೇರಿಕೊಂಡ ಸಿಂಧಿಯಾ, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಕೊಂಡಾಡಿದರು. ದೇಶದ ಭವಿಷ್ಯವು ಮೋದಿ ಅವರ ಕೈಯಲ್ಲಿ ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ.
ದಶಕಗಳ ಕಾಲ ಕಾಂಗ್ರೆಸ್ ಪಕ್ಷದೊಂದಿಗಿದ್ದ ಒಡನಾಟದ ಕುರಿತು ಮಾತನಾಡಿದ ಅವರು, ಆ ಪಕ್ಷದಲ್ಲಿ ಜನರಿಗೆ ಸೇವೆ ಸಲ್ಲಿಸಲು ಸಾಧ್ಯವಾಗದ ಕಾರಣ ಸಂಕಟಕ್ಕೆ ಸಿಲುಕಿಕೊಂಡಿದೆ. ಅಲ್ಲದೆ ಕಾಂಗ್ರೆಸ್ ಸಹೋದ್ಯೋಗಿಗಳೊಂದಿಗೆ ಮಧ್ಯಪ್ರದೇಶಕ್ಕಾಗಿ ಕಂಡ ಕನಸು 18 ತಿಂಗಳಲ್ಲಿ ಚೂರುಚೂರಾಗಿದೆ ಎಂದು ಹೇಳಿದ್ದಾರೆ.
ನನ್ನನ್ನು ಬಿಜೆಪಿ ಕುಟುಂಬಕ್ಕೆ ಆಹ್ವಾನಿಸಿದ್ದಕ್ಕಾಗಿ ಬಿಜೆಪಿ ಮುಖ್ಯಸ್ಥ ನಡ್ಡಾ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಅವರು ಜನರಿಗೆ ಸೇವೆ ಸಲ್ಲಿಸಲು ಒಂದು ವೇದಿಕೆ ನೀಡಿದ್ದಾರೆ ಎಂದು ಹೇಳಿದ್ದಾರೆ.