ನವದೆಹಲಿ: ಕೊರೊನಾ ಮತ್ತು ಜಾರಿಯಾದ ಲಾಕ್ಡೌನ್ ವಿವಿಧ ಕ್ಷೇತ್ರಗಳಾದ್ಯಂತ ವ್ಯವಹಾರಗಳನ್ನು ಮತ್ತು ಜನಸಾಮಾನ್ಯರ ಆದಾಯವನ್ನು ಅಕ್ಷರಶಃ ನೆಲಕಚ್ಚಿಸಿದೆ.
ಭವಿಷ್ಯವು ಸಂಪೂರ್ಣವಾಗಿ ಅನಿಶ್ಚಿತವಾಗಿದ್ದರಿಂದ ಹೆಚ್ಚಿನ ಸಂಖ್ಯೆಯ ಭಾರತೀಯರು ಈಗ ತಮ್ಮದೇ ಆದ ಮನೆಯನ್ನು ಖರೀದಿಸುವ ಭರವಸೆಯನ್ನೂ ಕಳೆದುಕೊಂಡಿದ್ದಾರೆ ಎಂದು ಜನರು ತಿಳಿಸಿರುವುದು ಸರ್ವೆಯಲ್ಲಿ ಬಹಿರಂಗವಾಗಿದೆ.
ಕುತೂಹಲಕಾರಿ ಸಂಗತಿಯೆಂದರೆ, ಮಧ್ಯಮ ಆದಾಯದ ಗುಂಪುಗಳಿಗೆ 2021ರ ಮಾರ್ಚ್ 31 ರವರೆಗೆ ಕೈಗೆಟುಕುವ ವಸತಿ ಘಟಕಗಳನ್ನು ಖರೀದಿಸಲು ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ (ಸಿಎಲ್‌ಎಸ್ಎಸ್) ಅನ್ನು ವಿಸ್ತರಿಸುವುದಾಗಿ ಸರ್ಕಾರ ಇತ್ತೀಚಿಗೆ ಪ್ರಕಟಣೆಯಲ್ಲಿ ತಿಳಿಸಿತ್ತು. ಆದರೆ ಅದರ ಹೊರತಾಗಿಯೂ ಜನರು ಮನೆ ಖರೀದಿ, ನಿರ್ಮಾಣದ ವಿಚಾರದಲ್ಲಿ ಹತಾಶೆಯ ಭಾವನೆ ಹೊಂದಿದ್ದಾರೆ.
ಹೆಚ್ಚಿನ ಆದಾಯ ಗಳಿಸುವ ಗುಂಪಿನ ಅನೇಕ ಜನರಿಗೂ ಈಗ ನಾಲ್ಕುಚಕ್ರದ ವಾಹನಗಳನ್ನು ಹೊಂದುವುದು ಕೂಡ ಸಾಧ್ಯವಾಗುವುದಿಲ್ಲ ಎಂದು ಭಾವಿಸುತ್ತಿದ್ದಾರೆ. 'ಕೋವಿಡ್ ಟ್ರಾಕರ್ ಎಕಾನಮಿ ಸರ್ವೆ ವೇವ್ 4' ಈ ವಿಭಾಗದಲ್ಲಿ ಶೇ 17.2 ರಷ್ಟು ಜನರು ಕಾರು ಖರೀದಿಸುವುದು ಈಗ ತಮ್ಮ ವ್ಯಾಪ್ತಿಯನ್ನು ಮೀರಿದೆ ಎಂದು ಹೇಳಿದ್ದಾರೆ.
ಮಧ್ಯಮ ಆದಾಯ ಮತ್ತು ಕಡಿಮೆ ಆದಾಯದ ಗುಂಪಿನಲ್ಲಿ ಸುಮಾರು ಶೇ 7.4 ಮತ್ತು ಶೇ 5.8 ರಷ್ಟು ಜನರು ಇಂಥ ಕಾಲಘಟ್ಟದಲ್ಲಿ ಟ್ರಾಕ್ಟರ್ ನಂತಹ ನಾಲ್ಕುಚಕ್ರದ ವಾಹನಗಳನ್ನು ಅಥವಾ ಆಟೋದಂತಹ ತ್ರಿಚಕ್ರ ವಾಹನಗಳನ್ನು ಖರೀದಿಸಲು ಸಾಧ್ಯವಾಗದಿರಬಹುದು ಎಂದು ಹೇಳಿದ್ದಾರೆ.
ಪ್ರಸ್ತುತ ಹೆಚ್ಚುತ್ತಿರುವ ದ್ವಿಚಕ್ರ ವಾಹನಗಳ ಬೇಡಿಕೆಯು ಆರ್ಥಿಕ ಪರಿಸ್ಥಿತಿಯ ಮಟ್ಟವನ್ನು ಪ್ರತಿಬಿಂಬಿಸುತ್ತದೆ. ಇನ್ನೂ ಕಡಿಮೆ ಆದಾಯ ಗಳಿಸುವ ಗುಂಪಿನಲ್ಲೂ ಶೇ 7.5 ರಷ್ಟು ಜನರು ದ್ವಿಚಕ್ರ ವಾಹನವನ್ನು ಖರೀದಿಸಲು ಸಾಧ್ಯವಾಗುವುದಿಲ್ಲ ಎಂದು ಭಾವಿಸಿದ್ದಾರೆ.
ಫೋನ್ ಅಥವಾ ಲ್ಯಾಪ್‌ಟಾಪ್ ಖರೀದಿಸುವ ಯೋಜನೆಗಳನ್ನು ಶೇ 2.4 ಕಡಿಮೆ ಆದಾಯ ಗಳಿಸುವ ಗುಂಪು, 1.9 ಮಧ್ಯಮ ಆದಾಯ ಗಳಿಸುವ ಗುಂಪು ಮತ್ತು ಶೇ 2.8 ಹೆಚ್ಚಿನ ಆದಾಯ ಗಳಿಸುವ ಗುಂಪುಗಳು ಮುಂದೂಡಿವೆ ಎಂದು ಸಮೀಕ್ಷೆ ತಿಳಿಸಿದೆ.