ತೆಲಂಗಾಣ: ಪೂರ್ವ ಲಡಾಖ್ನಲ್ಲಿ ಚೀನಾ ಯೋಧರ ದಾಳಿಯಲ್ಲಿ ಹುತಾತ್ಮರಾಗಿದ್ದ ಕರ್ನಲ್ ಸಂತೋಷ್ ಬಾಬು ಅವರ ಪತ್ನಿಗೆ ಸಿಎಂ ಕೆ.ಚಂದ್ರಶೇಖರ್ ರಾವ್ ಅವರು ಈ ಹಿಂದೆ 5 ಕೋಟಿ ರೂ. ಪರಿಹಾರ ನೀಡಿದ್ದರು. ಇದೀಗ ಗ್ರೂಪ್ 1 ಸರ್ಕಾರಿ ಕೆಲಸವನ್ನು ನೀಡಿದ್ದಾರೆ.
ಸಂತೋಷ್ ಬಾಬು ಅವರ ಪೋಷಕರು, ಪತ್ನಿ, ಮಕ್ಕಳನ್ನು ಸೂರ್ಯಪೇಟೆಯ ತಮ್ಮ ನಿವಾಸಕ್ಕೆ ಕರೆಸಿ, ಸಾಂತ್ವನ ಹೇಳಿದರು. ಇನ್ನು ನೇಮಕಾತಿ ಪತ್ರದಲ್ಲಿ ಹುದ್ದೆಯನ್ನು ನಮೂದಿಸಿಲ್ಲ. ಈ ಕುರಿತು ಮಾತನಾಡಿದ ರಾಜ್ಯ ಇಂಧನ ಸಚಿವ ಜಿ.ಜಗದೀಶ್ ರೆಡ್ಡಿ, ಸಂತೋಷ್ ಪತ್ನಿ ಸಂತೋಷಿಗೆ ಯಾವ ಇಲಾಖೆಯಲ್ಲಿ ಕೆಲಸ ಮಾಡಲು ಅನುಕೂಲವಾಗುತ್ತದೆಯೋ ಅದೇ ಇಲಾಖೆಯಲ್ಲಿ ಹುದ್ದೆ ನೀಡಲಾಗುವುದು ಎಂದರು.
ಇನ್ನು ಇದೇ ವೇಳೆ, ಕರ್ನಲ್ ಸಂತೋಷ್ ಬಾಬು ಅವರ ಕಂಚಿನ ಪ್ರತಿಮೆಯನ್ನು ಸೂರ್ಯಪೇಟೆಯ ಜಿಲ್ಲಾ ನ್ಯಾಯಾಲಯದ ಬಳಿಯ ರಸ್ತೆಯಲ್ಲಿ ಸ್ಥಾಪನೆ ಮಾಡಲಾಗುವುದು. ಮತ್ತು ಆ ರಸ್ತೆಗೆ ಕರ್ನಲ್ ಸಂತೋಷ್ ಮಾರ್ಗ ಎಂದು ನಾಮಕರಣ ಮಾಡಲಾಗುವುದು ಎಂದು ಘೋಷಿಸಿದ್ದಾರೆ.
ಸಿಎಂ ಈಗಾಗಲೇ ಸಂತೋಷ್ ಬಾಬು ಕುಟುಂಬಕ್ಕೆ 5 ಕೋಟಿ ರೂ. ಪರಿಹಾರ ಮತ್ತು ಹೈದರಾಬಾದ್ನ ಬಂಜಾರ ಹಿಲ್ಸ್ನಲ್ಲಿ ಭೂ ದಾಖಲೆ ಸಹಿತ 711 ಚದರ ಗಜಗಳ ಸೈಟ್ ಸಹ ನೀಡಿದ್ದಾರೆ. ಸಂತೋಷ್ ಕುಟುಂಬಕ್ಕೆ ಯಾವುದೇ ರೀತಿ ಸಹಾಯ ಮಾಡಲು ಸಿದ್ಧ ಎಂದು ಈ ಹಿಂದೆ ಸಿಎಂ ಕೆಸಿಆರ್ ಘೋಷಿಸಿದ್ದರು.