ಮುಂಬೈ: ಕೋಚಿಂಗ್ ತರಗತಿಗಳನ್ನು ಜ್ಯೂನಿಯರ್ ಕಾಲೇಜುಗಳಾಗಿ ನಡೆಸಲು ಮಹಾರಾಷ್ಟ್ರ ಸರ್ಕಾರ ನೀಡಿರುವ ಅನುಮತಿಯನ್ನು ಬಾಂಬೆ ಹೈಕೋರ್ಟ್ ತಡೆ ಹಿಡಿದಿದೆ.
ಏನಿದು ಘಟನೆ?
ಮಹಾರಾಷ್ಟ್ರದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುತ್ತಿದ್ದ ಕೋಚಿಂಗ್ ತರಗತಿಗಳು ಜ್ಯೂನಿಯರ್ ಕಾಲೇಜುಗಳಾಗಿ ಮಾರ್ಪಟ್ಟಿದ್ದವು. ಇದಕ್ಕೆ ಸ್ವ-ಹಣಕಾಸು ಶಾಲೆ ಕಾಯ್ದೆ 2012 ಪ್ರಕಾರ, ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡಿತ್ತು. ಇದರು ವಿರುದ್ಧ ಸಾಮಾಜಿಕ ಹೋರಾಟಗಾರರೊಬ್ಬರು ಅರ್ಜಿ ಸಲ್ಲಿಸಿದ್ದರು.
ವಾದವೇನು?
ಯಾವುದೇ ಮುನ್ನೆಚ್ಚರಿಕೆ ಇಲ್ಲದೇ ಸರ್ಕಾರ ಕೋಚಿಂಗ್ ತರಗತಿಗಳನ್ನು ಜ್ಯೂನಿಯರ್ ಕಾಲೇಜುಗಳಾಗಿ ಮಾರ್ಪಡಿಸಲು ಅನುಮತಿಸಿದೆ. ಕಾನೂನು ಪ್ರಕಾರ, ಕಾಲೇಜುಗಳಲ್ಲಿ ಪ್ರಯೋಗಾಲಯ, ಗ್ರಂಥಾಲಯ, ಆಟದ ಮೈದಾನ ಮುಂತಾದ ಸೌಕರ್ಯಗಳು ಬೇಕು.ಸುಮಾರು ಅರ್ಧ ಎಕರೆ ಅಥವಾ 500 ಚದರ ಮೀಟರ್ ಜಮೀನಿನಂತಹ ವಿಶಾಲವಾದ ಸ್ಥಳವನ್ನು ಹೊಂದಿರಬೇಕು. ನಿರ್ದಿಷ್ಟ ಮೂಲಸೌಕರ್ಯಗಳು ಶಾಲಾ ಅಥವಾ ಕಾಲೇಜು ಮಂಡಳಿ ಮಕ್ಕಳಿಗೆ ನೀಡಬೇಕೆಂದು ಕಾನೂನು ಸೂಚಿಸುತ್ತದೆ ಎಂದು ಅರ್ಜಿದಾರರ ವಕೀಲರಾದ ಅನಿಲ್ ಸಖಾರೆ ನ್ಯಾಯಾಲಯಕ್ಕೆ ತಿಳಿಸಿದರು.
ಕೋಚಿಂಗ್ ಕೇಂದ್ರಗಳು ಜ್ಯೂನಿಯರ್ ತರಗತಿಗಳನ್ನು ಮಾರ್ಪಟ್ಟ ಕಟ್ಟಡಗಳು ಕಾನೂನುಬದ್ಧವಾಗಿವೆಯೇ ಅಥವಾ ಕಾನೂನುಬಾಹಿರವೇ ಎಂಬುದರ ಬಗ್ಗೆ ಸರ್ಕಾರ ಯಾವುದೇ ಪರಿಶೀಲನೆ ನಡೆಸುತ್ತಿಲ್ಲ ಎಂದು ಕೋರ್ಟ್ಗೆ ತಿಳಿಸಿದರು.
ಸರ್ಕಾರದ ಅನುಮತಿಗೆ ತಡೆ!
ಎರಡು ರೂಮ್ ಅಥವಾ ಮಾಲ್‌ನ ಮಹಡಿ ಅಥವಾ ವಾಣಿಜ್ಯ ಘಟಕದಿಂದ ನಡೆಯುವ ಕೋಚಿಂಗ್ ತರಗತಿಗಳನ್ನು ಸಹ ಸರ್ಕಾರದಿಂದ ಜ್ಯೂನಿಯರ್ ಕಾಲೇಜ್ ನಡೆಸಲು ಅನುಮತಿ ಪಡೆಯುತ್ತಿದೆ. ಅಂತಹ ಕಟ್ಟಡಗಳು ಸಾಮಾನ್ಯವಾಗಿ ಉದ್ಯೋಗ ಪ್ರಮಾಣಪತ್ರ ಮತ್ತು ಅಗ್ನಿ ಸುರಕ್ಷತಾ ಪ್ರಮಾಣಪತ್ರಗಳನ್ನು ಸಹ ಹೊಂದಿರುವುದಿಲ್ಲ ಎಂದು ದ್ವಿ-ಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಎಸ್.ಸಿ. ಧರ್ಮಧಿಕಾರಿ ಮತ್ತು ಆರ್.ಐ.ಚಾಗ್ಲಾ ಗಮನಿಸಿದರು.
ಒಂದು ವೇಳೆ ಅಂತಹ ಕಟ್ಟಡಗಳಲ್ಲಿ ಬೆಂಕಿ ಅವಘಡ ಸಂಭವಿಸಿದ್ದೇ ಆದಲ್ಲಿ ಯಾರು ಹೊಣೆ? ಎಂದು ಸರ್ಕಾರಕ್ಕೆ ನ್ಯಾಯಮೂರ್ತಿ ಧರ್ಮಾಧಿಕಾರಿ ಪ್ರಶ್ನಿಸಿದ್ದಾರೆ. ಸರಿಯಾಗಿ ಪರಿಶೀಲನೆ ಕೈಗೊಳ್ಳದೇ ಕಿರಿಯ ಕಾಲೇಜುಗಳು ಸರ್ಕಾರ ಅನುಮತಿ ನೀಡುತ್ತಿದೆ ಎಂದು ಕೋರ್ಟ್ ಭಾವಿಸುತ್ತಿದೆ. ಪರಿಶೀಲನಾ ಸಮಿತಿಗೆ ಕೋರ್ಟ್ಗೆ ತಿಳಿಸುವವರೆಗೆ ಯಾವುದೇ ಕೋಚಿಂಗ್ ಕ್ಲಾಸ್ಗಳಿಗೆ ಕಿರಿಯ ಕಾಲೇಜಾಗಿ ಕಾರ್ಯನಿರ್ವಹಿಸಲು ಹೊಸ ಅನುಮತಿಗಳನ್ನು ನೀಡಬೇಡಿ ಎಂದು ಸರ್ಕಾರದ ಆದೇಶಕ್ಕೆ ಮುಂಬೈ ನ್ಯಾಯಾಲಯ ತಡೆಯೊಡ್ಡಿದೆ. ಮತ್ತೆ ಈ ಪ್ರಕರಣದ ವಿಚಾರಣೆ ಮಾರ್ಚ್ 4 ರಂದು ನಡೆಯಲಿದೆ.