ಕೋಲ್ಕತ್ತಾ: ಅಂಫಾನ್ ಸೂಪರ್ ಸೈಕ್ಲೋನ್ನಿಂದಾಗಿ ಪಶ್ಚಿಮ ಬಂಗಾಳದಲ್ಲಿ 72, ಒಡಿಶಾದಲ್ಲಿ ಒಂದು ಹಾಗೂ ಬಾಂಗ್ಲಾದೇಶದಲ್ಲಿ 13 ಮಂದಿ ಬಲಿಯಾಗಿದ್ದು, ಅಪಾರ ಪ್ರಮಾಣದಲ್ಲಿ ಆಸ್ತಿ-ಪಾಸ್ತಿ ಹಾನಿಯಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಚಂಡಮಾರುತದಿಂದ ಉಂಟಾದ ಅನಾಹುತಗಳ ದೃಶ್ಯಗಳನ್ನು ನೋಡಿದ್ದೇನೆ. ಇಂತಹ ಸವಾಲಿನ ಸಂದರ್ಭದಲ್ಲಿ ಪಶ್ಚಿಮ ಬಂಗಾಳದೊಂದಿಗೆ ಇಡೀ ರಾಷ್ಟ್ರವಿದೆ. ರಾಜ್ಯದ ಜನತೆಯ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಮೃತರ ಕುಟುಂಬಗಳಿಗೆ ತಲಾ 2.5 ಲಕ್ಷ ರೂ. ಪರಿಹಾರ:
ನಾನು ಈ ರೀತಿ ಅವಘಡವನ್ನು ಹಿಂದೆಂದೂ ಕಂಡಿರಲಿಲ್ಲ. ರಾಜ್ಯದಲ್ಲಿ 72 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಧಾನಿ ಮೋದಿಯವರನ್ನು ರಾಜ್ಯಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸುವಂತೆ ಕೇಳಿಕೊಳ್ಳುತ್ತೇನೆ ಎಂದು ಹೇಳಿರುವ ಸಿಎಂ ಮಮತಾ ಬ್ಯಾನರ್ಜಿ, ಮೃತರ ಕುಟುಂಬಗಳಿಗೆ ತಲಾ 2.5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ಸೈಕ್ಲೋನ್ ಪೀಡಿತ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿ, ಮನೆಗಳ ಮೇಲೆ ಬಿದ್ದಿರುವ ಮರಗಳು ಹಾಗೂ ರಸ್ತೆ ತೆರವು, ದುರಸ್ತಿ ಕಾರ್ಯ ಮುಂದುವರೆಸಿದ್ದಾರೆ.