ಹೈದರಾಬಾದ್: ಅನಿರ್ಧಿಷ್ಟಾವಧಿ ಪ್ರತಿಭಟನೆ ಮಾಡಿ ಕೆಲಸದಿಂದ ವಜಾಗೊಂಡಿರುವ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರನ್ನು ಯಾವುದೇ ಕಾರಣಕ್ಕೂ ಮತ್ತೆ ಕೆಲಸಕ್ಕೆ ಹಾಜರಾಗಲು ಅನುಮತಿ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಒತ್ತಿ ಹೇಳಿದ್ದಾರೆ.
ವಿವಿಧ ಬೇಡಿಕೆಗಳನ್ನಿಟ್ಟು ಟಿಎಸ್ಆರ್ಟಿಸಿಯ ಸುಮಾರು 48 ಸಾವಿರ ನೌಕರರು ದಸರಾ ಹಬ್ಬದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ್ದರು. ಇದರಿಂದ ಸರ್ಕಾರಕ್ಕೆ ಸುಮಾರು 1,200 ಕೋಟಿ ರೂ. ನಷ್ಟವಾಗಿದೆ. ಹಬ್ಬದ ಸಂದರ್ಭದಲ್ಲೇ ಚಾಲಕರು ಹಾಗೂ ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟಿಸುತ್ತಿರುವುದು ಅಪರಾಧ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, 48 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿ ಆದೇಶ ಹೊರಡಿಸಿದ್ದರು.
ಈ ಬಗ್ಗೆ ಮತ್ತೆ ಧ್ವನಿ ಎತ್ತಿರುವ ಕೆಸಿಆರ್, ಆರ್ಟಿಸಿ ಸಂಘಟನೆ ನಾಯಕರೊಂದಿಗೆ ಯಾವುದೇ ರೀತಿಯ ಮಾತುಕತೆಗೆ ಅವಕಾಶವಿಲ್ಲ. ಆರ್ಟಿಸಿಯನ್ನು ಸರ್ಕಾರದೊಂದಿಗೆ ವಿಲೀನಗೊಳಿಸುವ ಪ್ರಶ್ನೆಯೇ ಇಲ್ಲ. ಪ್ರತಿಭಟನೆಗೆ ಹಾಜರಾದ ನೌಕರರನ್ನು ಯಾವುದೇ ಕಾರಣಕ್ಕೂ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಇನ್ನೊಂದೆಡೆ ಆರ್ಟಿಸಿಯ ನಿರಂತರ ಸೇವೆ ಮುಂದುವರಿಕೆಗಾಗಿ ಖಾಸಗಿಯಾಗಿ ಚಾಲಕರು ಹಾಗೂ ನಿರ್ವಾಕರನ್ನು ತಾತ್ಕಾಲಿಕವಾಗಿ ನೇಮಿಸುತ್ತೇವೆ. ಈ ಮೂಲಕ ಆರ್ಟಿಸಿಯ 100 % ಸೇವೆ ಮುಂದುವರಿಯಲಿದೆ ಎಂದಿದ್ದಾರೆ. ಅಲ್ಲದೆ ನೌಕರರ ಮುಷ್ಕರದಿಂದ ಬಸ್ ಸೇವೆಗಳಲ್ಲಿ ಏರುಪೇರಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು ದಸರಾ ರಜೆಯನ್ನು ಅಕ್ಟೋಬರ್ 19ರವರೆಗೆ ವಿಸ್ತರಿಸಲಾಗಿದೆ.