ಹೈದರಾಬಾದ್ : ಇಂದು ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ಮಹತ್ವದ ತೀರ್ಪು ಸುಪ್ರೀಂ ಕೋರ್ಟ್ನಿಂದ ಹೊರಬೀಳಲಿದೆ. ಈ ವಿವಾದ ಆರಂಭಗೊಂಡಿದ್ದು ಯಾವಾಗ? ಪ್ರಕರಣ ಬೆಳೆದಿದ್ದು ಹೇಗೆ ಎಂಬುದನ್ನು ಈ ಸ್ಟೋರಿಯಲ್ಲಿ ನೋಡಿ...
- 1885: ಮೊದಲ ಬಾರಿಗೆ ರಾಮ ಜನ್ಮಭೂಮಿ ಹಾಗೂ ಬಾಬರಿ ಮಸೀದಿ ವಿವಾದವು ಕೋರ್ಟ್ ಮೆಟ್ಟಿಲೇರಿದ್ದು 1885ರಲ್ಲಿ. ವಿವಾದಿತ ಸ್ಥಳದಲ್ಲಿ ಮೇಲ್ಛಾವಣಿ ನಿರ್ಮಿಸಲು ಅನುಮತಿ ಕೋರಿ, ಮಹಂತ್ ರಘುಬೀರ್ ದಾಸ್ ಎಂಬವರು ಫೈಜಾಬಾದ್ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತಾರೆ.
- ಡಿಸೆಂಬರ್ 23, 1949: ವಿವಾದಿತ ಜಾಗದಲ್ಲಿ ವಿಗ್ರಹಗಳನ್ನು ಇರಿಸಿದ ನಂತರ ವಿವಾದ ಇನ್ನಷ್ಟು ಹೆಚ್ಚಾಗುತ್ತದೆ.
- ಜನವರಿ 16, 1950: ರಾಮನ ಆರಾಧನೆಯ ಹಕ್ಕುಗಳಿಗಾಗಿ ಫೈಜಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ಗೋಪಾಲ್ ಸಿಂಗ್ ವಿಶಾರದ್ ಮೊಕದ್ದಮೆ ಹೂಡುತ್ತಾರೆ.
- ಡಿಸೆಂಬರ್ 05, 1950: ಪೂಜೆಯನ್ನು ಮುಂದುವರಿಸಲು ಅನುಮತಿಗಾಗಿ ಮಹಂತ್ ಪರಮಹನ್ಸ್ ರಾಮ್‌ಚಂದ್ರ ದಾಸ್ ಮತ್ತೆ ಮೊಕದ್ದಮೆ ಹೂಡುತ್ತಾರೆ.
- ಡಿಸೆಂಬರ್ 17, 1959: ನಿರ್ಮೋಹಿ ಅಖಾರಾ ವಿವಾದಿತ ಸ್ಥಳವನ್ನು ಸ್ವಾಧೀನಪಡಿಸಿಕೊಳ್ಳಲು ಕೋರಿ ಮೊಕದ್ದಮೆ ಹೂಡುತ್ತಾರೆ.
- ಡಿಸೆಂಬರ್ 18, 1961: ಉತ್ತರ ಪ್ರದೇಶದ ಸುನ್ನಿ ವಕ್ಫ್ ಮಂಡಳಿಯು ವಿವಾದಿತ ಜಾಗದ ಮಾಲೀಕತ್ವಕ್ಕಾಗಿ ಕೋರ್ಟ್ ಮೆಟ್ಟಿಲೇರುತ್ತದೆ.
- ಜುಲೈ 01, 1989: ಭಗವಾನ್ ರಾಮ್ ಲಲ್ಲಾ ವಿರಾಜ್ಮಾನ್ ಎಂಬವರು ಐದನೇ ಮೊಕದ್ದಮೆ ಹೂಡುತ್ತಾರೆ.
- ಏಪ್ರಿಲ್ 2002: ಮೂರು ಹೈಕೋರ್ಟ್ ನ್ಯಾಯಾಧೀಶರು, ವಿವಾದಿತ ಸ್ಥಳದ ಮಾಲೀಕತ್ವದ ವಿಚಾರವಾಗಿ ವಿಚಾರಣೆ ಆರಂಭಿಸುತ್ತಾರೆ.
- ಸೆಪ್ಟೆಂಬರ್ 30, 2010: ಐತಿಹಾಸಿಕ ತೀರ್ಪು ನೀಡಿದ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ನ್ಯಾಯಪೀಠವು ರಾಮ್ ಲಲ್ಲಾ, ಸುನ್ನಿ ವಕ್ಫ್ ಮಂಡಳಿ ಮತ್ತು ನಿರ್ಮೋಹಿ ಅಖಾರಾ ನಡುವೆ ವಿವಾದಿತ ಭೂಮಿಯನ್ನು ಮೂರು ರೀತಿಯಲ್ಲಿ ವಿಂಗಡಿಸುತ್ತದೆ.
- ಮೇ 09, 2011: ಅಲಹಾಬಾದ್ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯುತ್ತದೆ.
- ಮಾರ್ಚ್ 21, 2017: ವಿವಾದ ಸಂಬಂಧ ಕೋರ್ಟ್ ಮೆಟ್ಟಿಲೇರಿರುವ ವಿವಿಧ ಅರ್ಜಿದಾರರು ಅಥವಾ ಪಾರ್ಟಿಗಳು, ಮಾತುಕತೆಯ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡುತ್ತದೆ.
- ಡಿಸೆಂಬರ್ 05, 2017: ಫೆಬ್ರವರಿ 08, 2018 ರಂದು ನಾಗರಿಕ ಮೇಲ್ಮನವಿಗಳನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರ್ಧರಿಸುತ್ತದೆ.
- ಫೆಬ್ರವರಿ 08, 2018: ಅಯೋಧ್ಯೆ ವಿವಾದವನ್ನು ಕೇವಲ ಒಂದು ಭೂವಿವಾದ ಪ್ರಕರಣವನ್ನಾಗಿ ಪರಿಗಣಿಸಲು ಅರ್ಜಿದಾರ ಪಕ್ಷಗಳಿಗೆ ಸುಪ್ರೀಂ ಹೇಳುತ್ತದೆ.
- ಮೇ 09, 2019: ಮೂವರು ಸದಸ್ಯರ ಮಧ್ಯಸ್ಥಿಕೆ ಸಮಿತಿ ಸುಪ್ರೀಂ ಕೋರ್ಟ್‌ನಲ್ಲಿ ವರದಿಯನ್ನು ಸಲ್ಲಿಸುತ್ತದೆ.
- ಅಕ್ಟೋಬರ್ 16, 2019: ಸುಪ್ರೀಂ ಕೋರ್ಟ್ನ ಐವರು ನ್ಯಾಯಾಧೀಶರ ಪೀಠವು ಆದೇಶವನ್ನು ಕಾಯ್ದಿರಿಸುತ್ತದೆ.
- ಅಂತಿಮವಾಗಿ ಸುಮಾರು 40 ದಿನಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಇಂದು(ಶನಿವಾರ) ಅಂತಿಮ ತೀರ್ಪು ಪ್ರಕಟಿಸಲಿದೆ.