ಉಜ್ಜಯಿನಿ(ಮಧ್ಯಪ್ರದೇಶ): ಉಜ್ಜಯಿನಿಯ ಪ್ರಸಿದ್ಧ ಮಹಾಕಾಳೇಶ್ವರ ದೇವಾಲಯವು ಶಿವನಿಗೆ ಮುಡಿಪಾದ ದೇವಾಲಯವಾಗಿದ್ದು, ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಇದು ಕೂಡ ಒಂದು. ಹಾಗೂ ಉಜ್ಜಯಿನಿಯ ಅತ್ಯಂತ ಪವಿತ್ರ ದೇವಾಲಯಗಳಲ್ಲಿ ಶ್ರೀ ಚಿಂತಾಮಣಿ ಗಣೇಶ ದೇವಾಲಯವೂ ಕೂಡ ಖ್ಯಾತಿ ಪಡೆದಿದೆ.
ಈ ದೇವಾಲಯವು ಉಜ್ಜಯಿನಿಯಿಂದ ಸುಮಾರು ಐದಾರು ಕಿ.ಮೀ ದೂರದಲ್ಲಿದೆ. ಇಲ್ಲಿ ಗಣೇಶನು ತನ್ನ ಮೂರು ರೂಪಗಳಲ್ಲಿ ವಿರಾಜಮಾನವಾಗಿದ್ದಾನೆ. ಮೊದಲ ರೂಪ ಚಿಂತಾಮಣಿ ಗಣೇಶ, ಎರಡನೇ ರೂಪ ಇಚ್ಚಮನ್ ಗಣೇಶ ಮತ್ತು ಮೂರನೆಯ ರೂಪ ಸಿದ್ಧಿವಿನಾಯಕ ಗಣೇಶ.
ಈ ಮೂರು ರೂಪಗಳ ದರ್ಶನ ಮಾಡಿದರೆ, ಭಕ್ತರ ಎಲ್ಲ ದುಃಖಗಳು ಮಾಯವಾಗುತ್ತವೆ. ಚಿಂತಮಣಿ ಗಣೇಶ ಎಲ್ಲ ಚಿಂತೆಗಳನ್ನು ದೂರ ಮಾಡುತ್ತಾನೆ. ಇಚ್ಚಮನ್ ಗಣೇಶ ಆಸೆಗಳನ್ನು ಈಡೇರಿಸುತ್ತಾನೆ ಹಾಗೂ ಸಿದ್ಧಿ ವಿನಾಯಕ ತನ್ನ ಭಕ್ತರಿಗೆ ಸಕಲ ಸಿದ್ಧಿ ಕೊಡುತ್ತಾನೆ ಎಂಬ ನಂಬಿಕೆಯಿದೆ.
ಈ ದೇವಸ್ಥಾನಕ್ಕೆ ಸಂಬಂಧಿಸಿದ ಒಂದು ದಂತಕಥೆಯಿದ್ದು, ಇಲ್ಲಿಗೆ ಭಗವಾನ್ ಶ್ರೀರಾಮಮು, ಸಹೋದರ ಲಕ್ಷ್ಮಣ ಹಾಗೂ ಪತ್ನಿ ಸೀತಾಮಾತೆಯೊಂದಿಗೆ ಬಂದಿದ್ದರು ಎಂದು ನಂಬಲಾಗಿದೆ.
ರಾಮನು ಚಿಂತಾಮಣಿ ಗಣೇಶನನ್ನು, ಲಕ್ಷ್ಮಣನು ಇಚ್ಚಮಾನ್ ಗಣೇಶನನ್ನು ಹಾಗೂ ಸೀತೆಯು ಸಿದ್ಧಿವಿನಾಯಕ ಗಣೇಶನನ್ನು ಪೂಜಿಸಿದರು. ಅಂದಿನಿಂದ ಈ ದೇವಾಲಯದಲ್ಲಿ ಗಣೇಶನನ್ನು ಮೂರು ರೂಪಗಳನ್ನು ಪೂಜಿಸಲಾಗುತ್ತದೆ ಎಂದು ಹೇಳಲಾಗುತ್ತದೆ.
ಈ ದೇವಸ್ಥಾನದ ಇತಿಹಾಸ ಪ್ರಾಚೀನ ಕಾಲದಿಂದಲೂ ಇದೆ. ದೇವಾನು ದೇವತೆಗಳು ಭೂಮಿಗೆ ಬಂದು ತಮ್ಮ ಭಕ್ತರ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ಕಲ್ಪನೆಯಲ್ಲಿ ಜನರು ನಂಬಿಕೆ ಇಟ್ಟುಕೊಂಡಿದ್ದರು. ಅಂತಹ ಒಂದು ಕಲ್ಪನೆಯಿಂದ ಗಣೇಶನು ಭೂಮಿಗೆ ಬಂದು ಈ ದೇವಸ್ಥಾನವನ್ನು ಉಜ್ಜಯಿನಿಯಲ್ಲಿ ನಿರ್ಮಿಸಿದನು ಎನ್ನುವ ಕಥೆಯೂ ಕೂಡ ಬಹಳ ಜನಪ್ರಿಯವಾಗಿದೆ.
ಈ ಪುರಾತನ ದೇವಾಲಯವು ಮಧ್ಯಪ್ರದೇಶದಲ್ಲೇ ಅತಿ ಹೆಚ್ಚು ಭಕ್ತರು ಭೇಟಿ ನೀಡುವಂತಹ ದೇವಾಲಯವಾಗಿದೆ. ತಮ್ಮ ಎಲ್ಲ ಸಮಸ್ಯೆಗಳಿಗೆ ಬಪ್ಪಾ ಪರಿಹಾರಿಸಿತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ. ಗಣೇಶ ಚತುರ್ಥಿಯ ದಿನದಿಂದ ಅನಂತ ಚತುರ್ದಶಿವರೆಗೆ ದೇವಸ್ಥಾನದಲ್ಲಿ ಭಕ್ತರ ದಂಡೇ ಸೇರುತ್ತದೆ. ಇಲ್ಲಿ ಶತಮಾನಗಳಿಂದ ಗಣೇಶ ತನ್ನ ಭಕ್ತರ ಎಲ್ಲ ನೋವುಗಳನ್ನು ದೂರ ಮಾಡುತ್ತಿದ್ದಾನೆ.
ದೇಗುಲವಿರುವ ತಾಣದಲ್ಲಿ ಶಿಪ್ರಾ ನದಿಯು ಹರಿಯುತಿದ್ದು, ಪಕ್ಕದಲ್ಲೆ ಫತೇಹ್‍ಪುರ್ ರೈಲು ಮಾರ್ಗವನ್ನು ಕಾಣಬಹುದು. ಈ ದೇವಾಲಯಕ್ಕೆ ಪ್ರವಾಸಿಗರು ಅಥವಾ ಭಕ್ತರು ರಿಕ್ಷಾ, ಬಸ್ಗಳ ಹೊರತಾಗಿ ರೈಲಿನಿಂದಲೂ ಸುಲಭವಾಗಿ ತಲುಪಬಹುದಾಗಿದೆ.