ನವದೆಹಲಿ: ಪೂರ್ವ ಲಡಾಖ್‌ನ ಎಲ್ಎಸಿ ಗಡಿಯಲ್ಲಿ ಭಾರತ ಮತ್ತು ಚೀನಾ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಮುಂದುವರೆದಿದ್ದು, ಪ್ಯಾಟ್ರೋಲಿಂಗ್ ಪಾಯಿಂಟ್ 15ರಲ್ಲಿ ಉಭಯ ಸೇನೆಗಳು ಸುಮಾರು ಎರಡು ಕಿಲೋಮೀಟರ್ ಹಿಂದಕ್ಕೆ ಸರಿದಿವೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.
ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾದಲ್ಲಿ ಉಭಯ ದೇಶಗಳ ಸೇನೆಯನ್ನು ಹಿಂದಕ್ಕೆ ಕರೆದುಕೊಳ್ಳುವ ಪ್ರಕ್ರಿಯೆ ಸೋಮವಾರದಿಂದ ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಪ್ಯಾಟ್ರೋಲಿಂಗ್ ಪಾಯಿಂಟ್ 15ರಲ್ಲಿ ಉಭಯ ದೇಶಗಳು ತಮ್ಮ ಸೈನ್ಯವನ್ನು ಸುಮಾರು ಹಿಂದಕ್ಕೆ ಕರೆಸಿಕೊಂಡಿವೆ. ಇದರಿಂದಾಗಿ ಘರ್ಷಣೆಯಾದ ಸ್ಥಳದಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರಕ್ಕೆ ಸೇನೆಗಳು ತಲುಪಲಿವೆ ಎಂದು ಹೇಳಲಾಗುತ್ತಿದೆ.
ಸೈನ್ಯ ತೆರವು ಪ್ರಕ್ರಿಯೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎರಡು ರಾಷ್ಟ್ರಗಳ ಮಧ್ಯೆ ಹೆಚ್ಚಿನ ಮಾತುಕತೆ ನಡೆಯಲಿದ್ದು, ಶಾಂತಿ ಸ್ಥಾಪನೆಗಾಗಿ ಶೀಘ್ರದಲ್ಲಿ ಕ್ರಮ ಕೈಗೊಳ್ಳುವುದಾಗಿ ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ.
ಭಾನುವಾರ ಎರಡೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಚೀನಾ ಸ್ಟೇಟ್ ಕೌನ್ಸಿಲರ್ ಹಾಗೂ ವಿದೇಶಾಂಗ ಸಚಿವ ವ್ಯಾಂಗ್ ಯಿ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದರು. ಈ ಸಂಭಾಷಣೆಯಲ್ಲ ಸೈನ್ಯದ ತೆರವಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದರು ಎಂದು ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿತ್ತು.
ಇದಾದ ನಂತರ ಚೀನಾ ಸೇನೆ ಗಾಲ್ವಾನ್ ಕಣಿವೆ ಪ್ರದೇಶದಿಂದ ಸುಮಾರು 2 ಕಿಲೋಮೀಟರ್ ಹಿಂದಕ್ಕೆ ಸೇನೆಯನ್ನು ಕರೆಸಿಕೊಂಡಿತ್ತು. ಆದರೆ ಸೇನೆಗೆ ಸಂಬಂಧಿಸಿದ ವಾಹನಗಳು ಹಾಗೂ ಶಸ್ತ್ರಗಳನ್ನು ತೆರವು ಮಾಡಿರಲಿಲ್ಲ. ಈಗ ಪ್ಯಾಟ್ರೋಲಿಂಗ್ ಪಾಯಿಂಟ್ 15ರಲ್ಲಿ ಉಭಯ ಸೇನೆಗಳ ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರದೇಶಗಳಲ್ಲಿ ಸೇನೆ ತೆರವಾಗುವ ಸಾಧ್ಯತೆ ಹೆಚ್ಚಾಗಿದೆ.