ನವದೆಹಲಿ: ಭಾರತ - ಚೀನಾ ಗಡಿಯಲ್ಲಿ ದಾರಿ ತಪ್ಪಿ ಭಾರತದ ಗಡಿಯೊಳಗೆ ನುಸುಳಿದ್ದ ಚೀನಾ ಸೈನಿಕನನ್ನು ಈಗಾಗಲೇ ಡ್ರ್ಯಾಗನ್ ದೇಶಕ್ಕೆ ಹಸ್ತಾಂತರ ಮಾಡಲಾಗಿದೆ. ಇದೀಗ ಅವರ ಬಳಿ ಯಾವ ವಸ್ತುಗಳಿದ್ದವು ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಸೋಮವಾರ ಬೆಳಗ್ಗೆ ಚಮರ್ -ಡೆಮ್ಚೊಕ್ ಪ್ರದೇಶದಲ್ಲಿ ಚೀನಾದ ಸೈನಿಕ ಕಾರ್ಪೊರಲ್ ವಾಂಗ್ ಯಾ ಲಾಂಗ್ನನ್ನು ಭಾರತೀಯ ಯೋಧರು ಬಂಧಿಸಿ, ಮಂಗಳವಾರ ಚೀನಾದ ಪಿಎಲ್ಎ ಪಡೆಗಳಿಗೆ ಹಸ್ತಾಂತರ ಮಾಡಲಾಗಿತ್ತು. ಆತನ ಬಳಿ ಸ್ಲೀಪಿಂಗ್ ಬ್ಯಾಗ್, ಶೇಖರಣಾ ಸಾಧನ(ಸ್ಟೋರೆಜ್ ಡಿವೈಸ್) ಹಾಗೂ ಒಂದು ಮೊಬೈಲ್ ಫೋನ್ ಲಭ್ಯವಾಗಿದೆ. ಇದರ ಜತೆ ಆತನ ಬಳಿ ಇದ್ದ ಚೀನಾ ಸೇನೆಗೆ ಸೇರಿದ ಐಡಿ ಕಾರ್ಡ್ ಸಿಕ್ಕಿದೆ. ಆತನ ಬಂಧನ ಮಾಡುತ್ತಿದ್ದಂತೆ ಭಾರತೀಯ ಸೇನಾಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು.
ಒಂದು ದಿನ ಭಾರತದ ವಶದಲ್ಲಿದ್ದ ಚೀನಾ ಸೈನಿಕನಿಗೆ ಅಗತ್ಯ ವೈದ್ಯಕೀಯ ನೆರವು, ಆಹಾರ ಮತ್ತು ಚಳಿಯಿಂದ ರಕ್ಷಣೆ ಮಾಡಿಕೊಳ್ಳಲು ಬೆಚ್ಚನೆ ಉಡುಪು ನೀಡಲಾಗಿತ್ತು. ಭಾರತ - ಚೀನಾ ನಡುವೆ ಲಡಾಖ್ ಗಾಲ್ವಾನ್ ವ್ಯಾಲಿ ವಿಚಾರವಾಗಿ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಎರಡು ದೇಶದ ಮಿಲಿಟರಿ ಸ್ಥಳದಲ್ಲಿ ಬೀಡು ಬಿಟ್ಟಿವೆ.