ಗಾಂಧಿನಗರ: ಗುಜರಾತ್ ಸರ್ಕಾರವು ಡ್ರ್ಯಾಗನ್ ಫ್ರೂಟ್‌ಗೆ ನಿನ್ನೆ 'ಕಮಲಂ' ಎಂದು ಮರುನಾಮಕರಣ ಮಾಡಿದೆ.
ಹಣ್ಣಿನ ಹೊರಭಾಗವು ಕಮಲದ ಆಕಾರಕ್ಕೆ ಹೋಲಿಕೆಯಾಗುವುದರಿಂದ ರಾಜ್ಯ ಸರ್ಕಾರವು ಹೆಸರು ಬದಲಿಸಲು ನಿರ್ಧರಿಸಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾಣಿ ಹೇಳಿದ್ದಾರೆ.
ಸಂಸ್ಕೃತದಲ್ಲಿ 'ಕಮಲಂ' ಎಂದರೆ ತಾವರೆ (ಕಮಲ) ಎಂಬ ಅರ್ಥವಿದೆ. ಉಷ್ಣವಲಯದಲ್ಲಿ ಬೆಳೆಯುವ ಹಣ್ಣು ಡ್ರ್ಯಾಗನ್ ಹಣ್ಣು, ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯತೆ ಪಡೆದಿದೆ. ಅದರ ಭಿನ್ನ ಆಕಾರ ಮತ್ತು ರುಚಿ ಜನರ ಗಮನ ಸೆಳೆದಿದೆ. ಜೊತೆಗೆ ದಕ್ಷಿಣ ಅಮೆರಿಕದಿಂದ ಹೆಚ್ಚಿನ ಪ್ರಮಾಣದಲ್ಲಿ ಈ ಹಣ್ಣನ್ನು ಆಮದು ಮಾಡಿಕೊಳ್ಳಲಾಗುತ್ತದೆ.
ಈ ಹಣ್ಣಿಗೆ 'ಕಮಲಂ' ಎಂದು ಹೆಸರಿಸಲು ಗುಜರಾತ್ ಅರಣ್ಯ ಇಲಾಖೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಆ ಬಗ್ಗೆ 2020ರ ಜುಲೈ 26ರಂದು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿ, ರೈತರನ್ನು ಅಭಿನಂದಿಸಿದ್ದರು.
ವಿಟಮಿನ್ ಸಿ ಸೇರಿದಂತೆ ಹಲವು ವಿಟಮಿನ್‌ಗಳು ಹಾಗೂ ಖನಿಜಾಂಶಗಳನ್ನು ಅಧಿಕ ಮಟ್ಟದಲ್ಲಿ ಹೊಂದಿರುವ ಡ್ರ್ಯಾಗನ್ ಹಣ್ಣನ್ನು ಗುಜರಾತ್, ಕರ್ನಾಟಕ, ಕೇರಳ, ತಮಿಳುನಾಡು, ಪಂಜಾಬ್, ಒಡಿಶಾ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಾದ್ಯಂತ ಬೆಳೆಯಲಾಗುತ್ತದೆ.