ತೇಜ್ಪುರ್ (ಅಸ್ಸಾಂ): ಚೀನಾ ಮತ್ತೊಮ್ಮೆ ಕ್ಯಾತೆ ತೆಗೆಯಲು ಮುಂದಾಗಿದೆ. ಅರುಣಾಚಲ ಪ್ರದೇಶದ ತವಾಂಗ್ ಬಳಿಯ ಬೂಮ್ಲಾ ಸೆಕ್ಟರ್ಬಳಿ ಹೊಸದಾಗಿ ಮೂರು ಗ್ರಾಮಗಳನ್ನು ಚೀನಾ ಸ್ಥಾಪನೆ ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಗಾಲ್ವಾನ್ ಕಣಿವೆಯಲ್ಲಿ ಸಂಘರ್ಷದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ರಕ್ಷಣಾ ಪಡೆಗಳು ಹಾಗೂ ಪೀಪಲ್ಸ್ ಲಿಬರೇಷನ್ ಆಫ್ ಚೀನಾ ಸತತ ಮಾತುಕತೆಗಳು ನಡೆಸುತ್ತಿರುವ ಬೆನ್ನಲ್ಲೇ ಹೊಸ ಹಳ್ಳಿಗಳನ್ನು ಸೃಷ್ಟಿಸಿ ಚೀನಾ ಮತ್ತೊಮ್ಮೆ ಅಸಮಾಧಾನ ಭುಗಿಲೇಳಲು ಕಾರಣವಾಗುವ ಸಾಧ್ಯತೆ ಹೆಚ್ಚಾಗಿದೆ.
ಓದಿ: ಜಗತ್ತಿನ ಮೇಲೆ 'ಸ್ಪಷ್ಟ' ಕಣ್ಣಿಡಲು ಚೀನಾದಿಂದ ಉಪಗ್ರಹ ಉಡಾವಣೆ!
ಬೂಮ್ಲಾ ಕಣಿವೆಯಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿ ಭಾರತ, ಚೀನಾ ಭೂತಾನ್ ಗಡಿಗಳು ಸೇರುವ ಜಾಗದಲ್ಲಿ ಹಳ್ಳಿಗಳನ್ನು ಸೃಷ್ಟಿಸಲಾಗಿದೆ. ಈಗಾಗಲೇ ಸಂಘರ್ಷದಿಂದ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಹಳಸಿದ್ದು, ಮತ್ತಷ್ಟು ಗಂಭೀರಗೊಳ್ಳುವ ಸಾಧ್ಯತೆಯಿದೆ.
ಕೆಲವೊಂದು ಮೂಲಗಳ ಪ್ರಕಾರ ಬೇರೆಡೆಯ ಗ್ರಾಮಗಳನ್ನು ಇಲ್ಲಿಗೆ ಸ್ಥಳಾಂತರ ಮಾಡಲಾಗಿದೆ ಎನ್ನಲಾಗಿದ್ದು, ಕೆಲವೊಂದು ಅರುಣಾಚಲ ಪ್ರದೇಶದ ಮೇಲೆ ಹಿಡಿತ ಸಾಧಿಸಲು ಚೀನಾ ಕುತಂತ್ರ ರೂಪಿಸುತ್ತಿದೆ ಎಂಬುದು ಕೆಲವರ ವಾದವಾಗಿದೆ.