ನವದೆಹಲಿ: ಭಾರತದ ಜೊತೆಗೆ ಜಗಳಕ್ಕಿಳಿದಿರುವ ಚೀನಾದ ಭೂ ದಾಹ ಕಡಿಮೆಯಾದಂತಿಲ್ಲ. ಭಾರತಕ್ಕೆ ರಾಜತಾಂತ್ರಿಕವಾಗಿ ಪೆಟ್ಟು ಕೊಡುವ ಮೂಲಕ, ಹಿಮಾಲಯನ್ ಕಣಿವೆ ಪ್ರದೇಶದಲ್ಲಿ ಏಕಾಂಗಿಯಾಗಿ ಮಾಡಲು ಯತ್ನಿಸಿದೆ.
ಈ ಪ್ರಯತ್ನದ ಭಾಗವಾಗಿ ಇದೀಗ ಭೂತಾನ್‍ನ ಸಾತ್ಕೆಂಗ್ ವನ್ಯಜೀವಿ ಅಭಯಾರಣ್ಯದ ಮೇಲೆ ತನ್ನ ಹತೋಟಿ ಸಾಧಿಸಲು ಮುಂದಾಗಿದೆ. ಈ ಅಭಯಾರಣ್ಯ, ಈಶಾನ್ಯ ಭಾರತದ ಅರುಣಾಚಲದ ಪಕ್ಕದಲ್ಲಿದೆ. ಭೂತಾನ್‍ನ ಜೊತೆಗೆ ರಾಜತಾಂತ್ರಿಕ ಸಂಬಂಧ ಬಲವರ್ಧನೆ ಮೂಲಕ ಭಾರತ-ಭೂತಾನ್ ನಡುವಣ ಸಂಬಂಧ ಪರೀಕ್ಷೆಗೆ ಅದು ಮುಂದಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ, ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ವಾಂಗ್ ವೆನ್ಬಿನ್, ದಕ್ಷಿಣ ಏಷ್ಯಾದ ಅತಿ ಸಣ್ಣ ರಾಷ್ಟ್ರಗಳಲ್ಲೊಂದಾಗಿರುವ ಭೂತಾನ್ ಜೊತೆಗಿನ ಗಡಿ ಬಿಕ್ಕಟ್ಟು ಪರಿಹರಿಸಲು, ಒಂದು ಪ್ಯಾಕೇಜ್ ಘೋಷಿಸಲು ನಿರ್ಧರಿದೆ ಎಂದು ತಿಳಿಸಿದರು. "ಚೀನಾದ ನಿಲುವು ಸ್ಪಷ್ಟವಾಗಿದೆ ಹಾಗೂ ಅದು ಒಂದೇ ತರನಾಗಿದೆ. ಚೀನಾ ಹಾಗೂ ಭೂತಾನ್ ನಡುವಣ ಗಡಿ ವಿವಾದ ಇನ್ನೂ ಬಗೆಹರಿದಿಲ್ಲ. ಮಧ್ಯ, ಪೂರ್ವ, ಉತ್ತರ ಹಾಗೂ ಪಶ್ಚಿಮ ಭಾಗಗಳಲ್ಲಿ ಗಡಿ ವಿವಾದ ಇನ್ನೂ ಜೀವಂತವಾಗಿದೆ," ಎಂದು ಅವರು ತಿಳಿಸಿದರು ಎಂದು ಮಾಧ್ಯಮ ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
"ಈ ಎಲ್ಲಾ ವಿವಾದಗಳಿಗೆ ಪರಿಹಾರ ಎನ್ನುವಂತೆ, ಈಗ ಚೀನಾ ಒಂದು ಪ್ಯಾಕೇಜ್ ಘೋಷಿಸಲು ನಿರ್ಧರಿಸಿದೆ. ಇಂತಹ ವಿವಾದಗಳನ್ನು ದೊಡ್ಡದಾಗಿಸಲು ಚೀನಾಗೆ ಇಷ್ಟವಿಲ್ಲ. ಈ ವಿವಾದಕ್ಕೆ ಸಂಬಂಧಿಸಿ, ಭೂತಾನ್ ಜೊತೆಗೆ ಚೀನಾ ನಿರಂತರವಾಗಿ ಚರ್ಚಿಸುತ್ತಿದೆ. ಇದನ್ನು ಉಭಯ ದೇಶಗಳು ಶಾಂತಿಯುತವಾಗಿ ಬಗೆಹರಿಸಲು ನಿರ್ಧರಿಸಿವೆ," ಎಂದು ಅವರು ತಿಳಿಸಿದರು.
ವಾಂಗ್ ಹೇಳಿಕೆ ಮಹತ್ವ ಪಡೆಯಲು ಹಲವು ಕಾರಣಗಳಿವೆ. ಸಾತ್ಕೆಂಗ್ ವನ್ಯಜೀವಿ ಅಭಯಾರಣ್ಯವನ್ನು ಅಭಿವೃದ್ಧಿಪಡಿಸಲು, ವಿಶ್ವ ಪರಿಸರ ಫೆಸಿಲಿಟಿ ಫಂಡ್ (ಜಿಇಎಫ್) ನೆರವು ನೀಡಲು ಚೀನಾ ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದೆ. ಜಿಇಎಫ್ 183 ದೇಶಗಳನ್ನು ಒಳಗೊಂಡ ಒಂದು ವ್ಯವಸ್ಥೆಯಾಗಿದ್ದು, ಅದರಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಗಳು, ನಾಗರಿಕ ಸಮಾಜ, ಖಾಸಗಿ ಕಂಪನಿಗಳು ಪಾಲ್ಗೊಳ್ಳುವಿಕೆಯ ಮೂಲಕ, ವಿಶ್ವದ ಪರಿಸರ ಸಮಸ್ಯೆಗಳಿಗೆ ಪರಿಹಾರ ಕಂಡುಹುಡುಕುವ ಒಂದು ವ್ಯವಸ್ಥೆಯಾಗಿದೆ. ಇದು ರಾಷ್ಟ್ರಗಳಿಗೆ ಹಣಕಾಸು ನೆರವು ನೀಡುವ ಮೂಲಕ, ಪರಿಸರ ರಕ್ಷಣೆಗೆ ಯತ್ನಿಸುತ್ತದೆ.
ಆದರೆ, ವಿಶ್ಲೇಷಕರನ್ನು ದಂಗುಬಡಿಸಿದ ಅಂಶವೆಂದರೆ, ಈ ಸಂಬಂಧ ಚೀನಾ ವ್ಯಕ್ತಪಡಿಸಿದ ಆಕ್ಷೇಪ. ಏಕೆಂದರೆ, ಇದು ಚೀನಾ ಭಾಗವಾಗಿರಲು ಸಾಧ್ಯವೇ ಇಲ್ಲ. ಏಕೆಂದರೆ, ಇದು ಭಾರತ-ಭೂತಾನ್ ಗಡಿ ಭಾಗದಲ್ಲಿರುವ ಅಭಯಾರಣ್ಯವಾಗಿದೆ. ಇದು ಯಾವುದೇ ಕಾರಣಕ್ಕೂ ವಿವಾದಾಸ್ಪದವಾಗಿಲ್ಲ.
ಈ ಆಕ್ಷೇಪ ಭಾರತ-ಚೀನಾ, ಲಡಾಖ್ ಪ್ರದೇಶದಲ್ಲಿ ನಡೆದ ರಕ್ತಸಿಕ್ತ ಹೊಡೆದಾಟದ ಬಳಿಕ ಶಾಂತಿ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲೇ ಕೇಳಿ ಬಂದಿದೆ. ಕಳೆದ ತಿಂಗಳ ಈ ರಕ್ತಸಿಕ್ತ ಹೊಡೆದಾಟದಲ್ಲಿ ಉಭಯ ಸೇನೆಗಳೂ ಜೀವ ಹಾನಿ ಅನುಭವಿಸಿದ್ದವು. 45 ವರ್ಷಗಳ ಬಳಿಕ ಏಷ್ಯಾದ ಈ ಎರಡು ದೈತ್ಯ ಶಕ್ತಿಗಳ ನಡುವೆ ಈ ರಕ್ತಸಿಕ್ತ ಕಾದಾಟ ಸಂಭವಿಸಿತ್ತು. ಇದು ನಡೆದದ್ದು 3,488 ಕಿಲೋಮೀಟರ್ ವ್ಯಾಪ್ತಿಯ ಗಡಿನಿಯಂತ್ರಣ ರೇಖೆ ಬಳಿ.
ಸಾತ್ಕೆಂಗ್ ವನ್ಯಜೀವಿ ಅಭಯಾರಣ್ಯ, ಭೂತಾನ್‍ನ ಪೂರ್ವ ಭಾಗದ ಗಡಿಯಲ್ಲಿದ್ದು, ಈ ಭಾಗ ಭಾರತದ ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಂತಿದೆ. ಅರುಣಾಚಲ ಪ್ರದೇಶದ ಮೇಲೆ ಚೀನಾ ತನ್ನ ಹಕ್ಕು ಸ್ಥಾಪಿಸಲು ಪ್ರಯತ್ನಿಸುತ್ತಿದ್ದು, ಅದನ್ನು ದಕ್ಷಿಣ ಟಿಬೆಟ್ ಎಂದು ಕರೆಯುತ್ತಿದೆ.
ಭೂತಾನ್ ಹಾಗೂ ಚೀನಾ ನಡುವೆ ಯಾವುದೇ ಅಧಿಕೃತ ರಾಜತಾಂತ್ರಿಕ ಸಂಬಂಧವಿಲ್ಲ. 1951ರಲ್ಲಿ ಟಿಬೆಟ್ ಆಕ್ರಮಣ ಬಳಿಕ, ಭೂತಾನ್ ಹಾಗೂ ಚೀನಾ ನೆರೆಹೊರೆ ದೇಶಗಳಾದವು. 1984ರಿಂದೀಚೆಗೆ, ಎರಡೂ ದೇಶಗಳು 24 ಸುತ್ತಿನ ಮಾತುಕತೆಯನ್ನು ಗಡಿ ವಿವಾದ ಬಗೆಹರಿಸಲು ನಡೆಸಿವೆ. ಆದರೆ ಅವು ಫಲಪ್ರದವಾಗಿಲ್ಲ.
ಆದರೆ ಭಾರತ ಹಾಗೂ ಭೂತಾನ್ ದೃಢ ರಾಜತಾಂತ್ರಿಕ ಸಂಬಂಧ ಹೊಂದಿವೆ. ಭಾರತ ಭೂತಾನ್‍ನ ಪ್ರಮುಖ ರಾಜತಾಂತ್ರಿಕ ಪಾಲುದಾರ ರಾಷ್ಟ್ರ. ಜೊತೆಗೆ ಭೂತಾನ್‍ಗೆ ಅತಿ ಹೆಚ್ಚಿನ ನೆರವು ನೀಡುತ್ತಿರುವ ದೇಶವೆಂದರೆ ಭಾರತ. ಜೊತೆಗೆ ಭೂತಾನ್ ಅತಿ ಹೆಚ್ಚಿನ ವ್ಯಾಪಾರ ವಹಿವಾಟು ಹೊಂದಿರುವುದು ಭಾರತದ ಜೊತೆಗೆ.
ಚೀನಾದ ಹೊಸ ಹೇಳಿಕೆಗಳು, ಹಾಗೂ ನಿರ್ಧಾರ ಅದು ಭಾರತದ ಜೊತೆಗೆ ಹಿಮಾಲಯನ್ ಗಡಿಯಲ್ಲಿ ಕದನಕ್ಕೆ ಇಳಿದ ಬಳಿಕ ಹೊರ ಬಂದಿವೆ. ಡೊಕ್ಲಾಮ್ ಭಾಗದಲ್ಲಿ 2017ರಲ್ಲಿ 73ದಿನಗಳ ಜಟಾಪಟಿ ಬಳಿಕ, ಇದೀಗ, ಚೀನಾದ ಕಣ್ಣು ಭೂತಾನ್‍ನ ಮೇಲೆ ಬಿದ್ದಿದೆ. ಡೊಕ್ಲಾನ್ ಭಾರತ-ಭೂತಾನ್-ಚೀನಾ ಗಡಿ ಸಂಧಿಸುವ ಭಾಗ. ಈ ಭಾಗದಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ) ಹೊಸ ರಸ್ತೆ ನಿರ್ಮಿಸಲು ಆರಂಭಿಸಿದ ಬಳಿಕ ಈ ಉದ್ವಿಗ್ನತೆ ಸೃಷ್ಟಿಯಾಗಿತ್ತು. ಈ ಸಂದರ್ಭದಲ್ಲಿ ಭೂತಾನ್ ಭಾರತದ ಬೆಂಬಲಕ್ಕೆ ದೃಢವಾಗಿ ನಿಂತಿತ್ತು. ಆ ಘಟನೆ ಬಳಿಕ ಭೂತಾನ್-ಚೀನಾ ನಡುವೆ ಯಾವುದೇ ಮಾತುಕತೆ ನಡೆದಿಲ್ಲ.
ತಜ್ಞರ ಪ್ರಕಾರ, ಚೀನಾದ ಇದೀಗ ಹೊಸ ಪ್ಯಾಕೇಜ್ ಘೋಷಿಸಿ, ಆ ಮೂಲಕ ಭೂತಾನ್ ಮೇಲೆ ಒತ್ತಡ ಹೇರಿ ಡೊಕ್ಲಾಮ್‍ನಲ್ಲಿ ರಸ್ತೆ ನಿರ್ಮಿಸಲು ಯತ್ನಿಸುತ್ತಿದೆ.
ನವದೆಹಲಿ ಜವಾಹರಲಾಲ್ ವಿಶ್ವ ವಿದ್ಯಾನಿಲಯದ ಅಂತಾರಾಷ್ಟ್ರೀಯ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಎಸ್ ಡಿ ಮುನಿ ಈಟಿವಿ ಭಾರತದ ಜೊತೆಗೆ ಮಾತನಾಡಿ, ಚೀನಾ ಈ ಪ್ಯಾಕೇಜ್ ಮೂಲಕ, ಕೇಂದ್ರ ಹಾಗೂ ಪೂರ್ವ ಭೂತಾನ್ ಮೇಲಿನ ತನ್ನ ಬೇಡಿಕೆಯನ್ನು ಹಿಂತೆಗೆದುಕೊಂಡು, ಡೊಕ್ಲಾಮ್‍ನಲ್ಲಿ ರಸ್ತೆ ನಿರ್ಮಿಸಲು ಭೂತಾನ್‍ಗೆ ಒತ್ತಡ ಹೇರುವ ಸಾಧ್ಯತೆ ಇದೆ. ಆ ಮೂಲಕ ಡೊಕ್ಲಾಮ್ ಮೇಲೆ ತನ್ನ ಹಕ್ಕು ಸಾಧಿಸಲು ಚೀನಾ ಯತ್ನಿಸುತ್ತದೆ ಎನ್ನುತ್ತಾರೆ. ಚುಂಬಿ ಕಣಿವೆಯಲ್ಲಿ ಅತ್ಯಂತ ಮಹತ್ವದ್ದಾದ ಡೊಕ್ಲಾಮ್ ಭಾಗ ಭೂತಾನ್‍ನ ಪಶ್ಚಿಮದಲ್ಲಿದೆ. ಅದರ ಮೇಲೆ ಹಕ್ಕು ಸಾಧಿಸುವುದು ಚೀನಾದ ಗುರಿ," ಎನ್ನುತ್ತಾರೆ ಅವರು.
ಇದು ಭಾರತಕ್ಕೆ ಏಕೆ ತಲೆನೋವಿನ ಸಂಗತಿ? ಚುಂಬಿ ವ್ಯಾಲಿ ಭಾರತದ ಸಿಕ್ಕೀಂ ಹಾಗೂ ಭೂತಾನ್ ನಡುವಣ ಸಂಪರ್ಕ ಕೊಂಡಿ. ಇದು ಭಾರತದ ಸಿಲಿಗುರಿ ವ್ಯಾಲಿಗಿಂತ ಕೇವಲ ಐದು ಕಿಲೋ ಮೀಟರ್ ದೂರದಲ್ಲಿದೆ. ಇದು ಈಶಾನ್ಯ ಭಾರತವನ್ನು ಭಾರತದ ಇನ್ನಿತರ ಭಾಗದ ಜೊತೆಗೆ ಸಂಪರ್ಕಿಸುವ ಚಿಕನ್ ನೆಕ್ ಎಂದು ಕರೆಯಲ್ಪಡುವ ಸಿಲಿಗುರಿಗೆ ಹತ್ತಿರದಲ್ಲಿದೆ.
"ಭೂತಾನ್ ಮಾತ್ರ ಚೀನಾದ ಜೊತೆಗೆ ರಾಜತಾಂತ್ರಿಕ ಸಂಪರ್ಕ ಹೊಂದಿಲ್ಲದಿರುವ ಹಿಮಾಲಯನ್ ರಾಷ್ಟ್ರ. ಇದೀಗ ಭೂತಾನ್ ಜೊತೆಗೆ ರಾಜತಾಂತ್ರಿಕ ಸಂಪರ್ಕ ಹೊಂದುವ ಮೂಲಕ, ಚೀನಾ ಭಾರತ-ಭೂತಾನ್ ಸಂಬಂಧವನ್ನು ಪರೀಕ್ಷಿಸಲು ಹೊರಟಿದೆ," ಎನ್ನುತ್ತಾರೆ ಅವರು. "ಭೂತಾನ್ ಚೀನಾದ ಜೊತೆಗಿನ ಗಡಿ ವಿವಾದ ಬಗೆಹರಿಸಲು ಮುಂದಾಗಬಹುದು. ಆದರೆ. ಅದು ಭಾರತ-ಚೀನಾ ನಡುವಣ ಗಡಿ ವಿವಾದದಲ್ಲಿ ಮೂಗು ತೂರಿಸುವ ಸಾಧ್ಯತೆ ಇಲ್ಲ," ಎನ್ನುತ್ತಾರೆ ಅವರು.
ಮುನಿ ಅವರ ವಾದವನ್ನು ಡಿಪ್ಲೋಮಾಟ್ ರಿಸ್ಕ್ ಸಂಸ್ಥೆಯ ಸಂಶೋಧನಾ ನಿರ್ದೇಶಕ ಅಂಕಿತ್ ಪಾಂಡಾ ಕೂಡಾ ಒಪ್ಪುತ್ತಾರೆ. "ಭೂತಾನ್‍ನ ಭೂ ಪ್ರದೇಶದ 10% ಭಾಗದ ಮೇಲೆ ಚೀನಾ ಹಕ್ಕು ಸಾಧಿಸಲು ಯತ್ನಿಸುತ್ತಿದೆ. ಇದೀಗ, ಅದನ್ನು ಬಿಟ್ಟುಕೊಟ್ಟು ಡೊಕ್ಲಾಂ ಮೇಲೆ ಹಕ್ಕು ಸಾಧಿಸಲು ಅದು ಭೂತಾನ್‍ನ ಮೇಲೆ ಒತ್ತಡ ಹೇರಬಹುದು," ಎನ್ನುತ್ತಾರೆ ಅವರು.
ಭೂತಾನ್ ಭೂಭಾಗದ ಮೇಲೆ ಹಕ್ಕು ಸಾಧಿಸಲು ಚೀನಾ ಯತ್ನಿಸುತ್ತಿರುವುದು ಅದರ ಭೂ ದಾಹದ ಪ್ರತೀಕ. ಭಾರತದ ಜೊತೆಗಿನ ಗಡಿ ವಿವಾದ, ದಕ್ಷಿಣ ಚೀನಾ ಸಮುದ್ರ ವಿವಾದ, ಪೂರ್ವ ಚೀನಾದಲ್ಲಿ ಜಪಾನ್ ಗಡಿಭಾಗದಲ್ಲಿ ಸೆಂಕುಕು ದ್ವೀಪ ವಿವಾದ ಹೀಗೆ ಎಲ್ಲೆಡೆ ಚೀನಾ ತನ್ನ ಭೂದಾಹ ತೋರಿಸುತ್ತಿದೆ.
ಅಮೇರಿಕಾ ಸೇರಿದಂತೆ, ವಿಶ್ವದ ಎಲ್ಲಾ ದೊಡ್ಡ ರಾಷ್ಟ್ರಗಳು ಚೀನಾದ ಈ ಭೂದಾಹ, ಗಡಿ ವಿಸ್ತರಣೆಯ ಪ್ರಯತ್ನವನ್ನು ವಿರೋಧಿಸುತ್ತಿವೆ. "ಭೂತಾನ್ ದ್ವಿಪಕ್ಷೀಯವಾಗಿ ಇಡೀ ವಿವಾದವನ್ನು ಬಗೆಹರಿಸಿಕೊಳ್ಳಲು ಭಾರತ ಇಚ್ಛಿಸುತ್ತಿದೆ," ಎನ್ನುತ್ತಾರೆ ಮುನಿ.