ಬೀಜಿಂಗ್: ಈ ವಾರದ ಆರಂಭದಲ್ಲಿ ನಡೆದ ಭೀಕರ ಘರ್ಷಣೆಯ ನಂತರ ಭಾರತದ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ತಣ್ಣಗಾಗಿಸಲು ಚೀನಾ ಒಪ್ಪಿಕೊಂಡಿದೆ.
'ಗಾಲ್ವನ್ ಕಣಿವೆಯಲ್ಲಿನ ಘರ್ಷಣೆಯಿಂದ ಉಂಟಾದ ಗಂಭೀರ ಘಟನೆಗಳನ್ನು ನ್ಯಾಯಯುತವಾಗಿ ಎದುರಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ' ಎಂದು ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉಭಯ ದೇಶಗಳ ಮಿಲಿಟರಿ ಕಮಾಂಡರ್ಗಳ ಸಭೆಯ ಒಮ್ಮತಕ್ಕೆ ಎರಡೂ ದೇಶಗಳು ಬದ್ಧವಾಗಿರುತ್ತವೆ. ಎರಡೂ ದೇಶಗಳು ಸಾಧ್ಯವಾದಷ್ಟು ಬೇಗ ಪರಿಸ್ಥಿತಿಯನ್ನು ತಣ್ಣಗಾಗಿಸುತ್ತವೆ. ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡಿಕೊಳ್ಳಲಿವೆ ಎಂದು ಹೇಳಿದ್ದಾರೆ.
ಲಡಾಖ್ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ನಡೆದ ಘರ್ಷಣೆಯಲ್ಲಿ ಸೈನಿಕರು ಕಲ್ಲು ಮತ್ತು ಕೈಯಿಂದ ಪರಸ್ಪರ ಹೊಡೆದಾಡಿದ್ದಾರೆ ಎಂದು ಭಾರತೀಯ ಭದ್ರತಾ ಪಡೆಗಳು ತಿಳಿಸಿವೆ. ಚೀನಾ ಮಾತ್ರ ಭಾರತವೇ ತನ್ನ ಪಡೆಗಳ ಮೇಲೆ ಪ್ರಚೋದನಕಾರಿ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದೆ. ಇದು 1975ರಿಂದ ಭಾರತ ಮತ್ತು ಚೀನಾ ನಡುವಿನ ವಿವಾದಿತ ಗಡಿಯಲ್ಲಿ ನಡೆದ ಮೊದಲ ಮಾರಣಾಂತಿಕ ಘರ್ಷಣೆಯಾಗಿದೆ.