ಮಾಲ್ಡೀವ್ಸ್‌ನಲ್ಲಿ ಚೀನಾ ವಿರುದ್ಧದ ಧ್ವನಿ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಅಧ್ಯಕ್ಷ ಇಬ್ರಾಹಿಂ ಸೊಲಿಹ್ ಹಾಗೂ ವಿದೇಶಾಂಗ ಸಚಿವ ಅಬ್ದುಲ್ಲಾ ಶಹೀದ್ ಚೀನಾ ವಿರುದ್ಧ ಕಟುವಾಗಿ ಮಾತನಾಡದಿದ್ದರೂ, ಮಾಜಿ ಅಧ್ಯಕ್ಷ ಹಾಗೂ ಈಗಿನ ಮಜ್ಲಿಸ್, ಅಂದರೆ ಸಂಸತ್ತಿನ ಸ್ಪೀಕರ್ ಮೊಹಮದ್ ನಶೀದ್ ಈಗ ಚೀನಾ ವಿರುದ್ಧ ಕಟು ಮಾತುಗಳಲ್ಲಿ ಮಾತನಾಡುತ್ತಿದ್ದಾರೆ. ಇದು ಮಾಲ್ಡೀವ್ಸ್‌ನಲ್ಲಿ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಕಾರಣವಾಗುವ ಲಕ್ಷಣ ಕಂಡುಬಂದಿದೆ.
ಈಸ್ಟ್ ಇಂಡಿಯಾ ಕಂಪನಿಯು ವಸಾಹತುಶಾಹಿ ಕಾಲದಲ್ಲಿ ಮಾಲ್ಡೀವ್ಸ್‌ನ ಭೂಮಿಯನ್ನು ಆಕ್ರಮಿಸಿಕೊಂಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದ ಭೂಮಿಯನ್ನು ಈಗ ಚಿನಾ ಆಕ್ರಮಿಸಿಕೊಂಡಿದೆ ಎಂದು ನಶೀದ್ ಟೀಕಿಸಿದ್ದಾರೆ. ನಶೀದ್ ಸ್ಪೀಕರ್ ಆಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ.
ಅಧ್ಯಕ್ಷೀಯ ಅಧಿಕಾರವನ್ನು ಕಳೆದುಕೊಂಡು ಹಲವು ವರ್ಷಗಳವರೆಗೆ ಜೈಲು ವಾಸವನ್ನೂ ನಶೀದ್ ಅನುಭವಿಸಿದ್ದರು. ಅಷ್ಟೇ ಅಲ್ಲ, 2018ರಲ್ಲಿ ಅವರು ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಲು ಕೂಡಾ ಸಾಧ್ಯ ಆಗಿರಲಿಲ್ಲ. ಆದರೂ, ಇದರ ಪಕ್ಷ ಎಂ ಡಿ ಪಿ ಅಚ್ಚರಿಯ ರೀತಿಯಲ್ಲಿ ಚುನಾವಣೆಯ ವೇಳೆ ಅಧಿಕಾರಕ್ಕೆ ಏರಿದ್ದು, ವಿಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಸೊಲಿಹ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಭಾರತಕ್ಕೆ ಭೇಟಿ ನೀಡಿದ ಸೊಲಿಹ್ ಪ್ರಧಾನಿ ಮೋದಿ ಹಾಗೂ ಇತರ ನಾಯಕರೊಂದಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಈ ನಂತರ ಮಾಧ್ಯಮದ ಜೊತೆಗೆ ಮಾತನಾಡಿದ ಅವರು , ಸಣ್ಣ ದೇಶಗಳನ್ನು ತನ್ನ ಬಲೆಯಲ್ಲಿ ಸಿಕ್ಕಿ ಹಾಕಿಸುವ ಉದ್ದೇಶವನ್ನು ಇಟ್ಟುಕೊಂಡೇ, ಉದ್ದೇಶ ಪೂರ್ವಕವಾಗಿ ಚೀನಾ ಸಾಲಗಳನ್ನು ನೀಡುತ್ತದೆ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಕೂಡ ಅಂಥದ್ದೇ ಉದ್ದೇಶದಿಂದ ರೂಪಿಸುತ್ತದೆ ಎಂದಿದ್ದಾರೆ. ಮಾಲ್ಡೀವ್ಸ್ ಭೌಗೋಳಿಕವಾಗಿ ಅತ್ಯಂತ ಮಹತ್ವದ ಭೂಭಾಗವಾಗಿದ್ದು, ತನ್ನ ಸಾಲಗಳನ್ನು ಚೀನಾ ಸಂಪೂರ್ಣವಾಗಿ ಬದಲಾವಣೆ ಮಾಡಬೇಕಿದೆ ಎಂದು ಅವರು ಹೇಳಿದ್ದಾರೆ.
ಈಸ್ಟ್ ಇಂಡಿಯಾ ಕಂಪನಿಯು ವಸಾಹತುಶಾಹಿ ಕಾಲದಲ್ಲಿ ವಶಪಡಿಸಿಕೊಂಡಿದ್ದ ಭೂಮಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿದೆ. ಅವರು ನಮಗೆ ಯಾವುದೇ ರೀತಿಯಲ್ಲೂ ಅಭಿವೃದ್ಧಿಯಲ್ಲಿ ಸಹಾಯವನ್ನು ಮಾಡಲೇ ಇಲ್ಲ. ಇದೊಂದು ಸಾಲದ ಸುಳಿಯಲ್ಲಿ ನಮ್ಮನ್ನು ಸಿಕ್ಕಿಹಾಕಿಸುವ ಬಲೆ. ಈಗ ನಾವು ಏನಿದ್ದರೂ ಒಪ್ಪಂದಗಳನ್ನು ಮಾಡಿಕೊಳ್ಳುವುದು ಅನಿವಾರ್ಯ. ಒಪ್ಪಂದಗಳನ್ನು ನಾವು ನಿಲ್ಲಿಸಲು ಸಾಧ್ಯವೂ ಇಲ್ಲ. ಅದಕ್ಕೆ ತಗಲುವ ವೆಚ್ಚವನ್ನೂ ನಾವು ಭರಿಸುವುದು ಅನಿವಾರ್ಯ. ಆದರೆ ಚೀನಾ ಸರ್ಕಾರ ಸಾಲವನ್ನು ಸಂಪೂರ್ಣವಾಗಿ ಬದಲಾವಣೆ ಮಾಡಬೇಕು ಎಂದು ನಶೀದ್ ಹೇಳಿದ್ದಾರೆ.
ಪ್ರವಾಸೋದ್ಯಮದ ಮೇಲೆ ಹೆಚ್ಚು ಅವಲಂಬನೆ ಹೊಂದಿರುವ ಈ ಪುಟ್ಟ ದ್ವೀಪ ಮಾಲ್ಡೀವ್ಸ್ ಚೀನಾಗೆ ಅಂದಾಜು 3.5 ಬಿಲಿಯನ್ ಯು ಎಸ್ ಡಿ, ಅಂದರೆ 24 ಸಾವಿರ ಕೋಟಿ ರೂ. ಸಾಲ ಮರು ಪಾವತಿ ಮಾಡುವ ಅಗತ್ಯ ಮೂಡಿದೆ. ಅಧ್ಯಕ್ಷ ಯಾಸ್ಮೀನ್ ಅವಧಿಯಲ್ಲಿ ಚೀನಾ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದೆ. ಸೇತುವೆಗಳು ಹಾಗೂ ರಸ್ತೆಗಳಂತಹ ಹಲವು ಮೂಲಸೌಕರ್ಯ ಯೋಜನೆಗಳನ್ನು ಚೀನಾ ಅಭಿವೃದ್ಧಿಪಡಿಸಿದೆ.
“ಸಾಲ ವಾಪಸ್ ಮಾಡಲು ಈಗ ಸಾಧ್ಯವೇ ಇಲ್ಲ. ಹಣ ನಮಗೆ ಎಂದೂ ಬಂದೇ ಇಲ್ಲ. ಆದರೆ ನಮ್ಮ ಬಳಿ ಈಗ ಪಾವತಿ ಮಾಡಬೇಕಿರುವ ಬಿಲ್ ಮಾತ್ರ ಇದೆ. ಆದರೂ ನಾವು ಪಾವತಿ ಮಾಡಿಯೇ ಮಾಡುತ್ತೇವೆ. ಮಾಲ್ಡೀವ್ಸ್‌ನ ಇತರ ಯಾವ ರಾಜಕಾರಣಿಯೂ ಇಷ್ಟು ಹಣವನ್ನು ಚೀನಾಗೆ ಪಾವತಿ ಮಾಡುವ ಸಾಮರ್ಥ್ಯ ಹೊಂದಿಲ್ಲ.” ಎಂದು ಅವರು ಹೇಳಿದ್ದಾರೆ. ‘ಪೌರತ್ವ ತಿದ್ದುಪಡಿ ಕಾಯ್ದೆಯು ಭಾರತದ ಆಂತರಿಕ ವಿಷಯ’
ಚೀನಾ ತನ್ನ ಸಾಲಗಳನ್ನು ಮರು ರೂಪಣೆ ಮಾಡಬೇಕು. ಒಂದು ವೇಳೆ ಚೀನಾ ತನ್ನ ಸಾಲಗಳನ್ನು ಕಡಿಮೆ ಮಾಡಲು ಮುಂದಿನ ದಿನಗಳಲ್ಲಿ ಒಪ್ಪದೇ ಇದ್ದರೆ, ನಾವು ಚೀನಾವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಎಳೆದು ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ ಎಂದು ದೂರಲಿದ್ದೇವೆ ಎಂದು ಅವರು ಹೇಳಿದ್ದಾರೆ. ಈ ಹಿಂದೆ ಯಾಸ್ಮೀನ್ ಅಧಿಕಾರದ ಅವಧಿಯಲ್ಲಿ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದ (ಎಫ್ ಟಿ ಎ) ಈಗ ಸತ್ತು ಹೋಗಿದೆ. 2018ರಲ್ಲಿ ಸಂಸತ್ತಿನಲ್ಲಿ ಯಾವುದೇ ವಿರೋಧವೇ ಇಲ್ಲದೇ ಈ ಒಪ್ಪಂದವನ್ನು ಅನುಮೋದಿಸಲಾಗಿತ್ತು.
ಮುಕ್ತ ವ್ಯಾಪಾರ ಒಪ್ಪಂದ ಈಗ ರದ್ದಾಗಿದೆ. ಹೀಗಾಗಿ ಮತ್ತೆ ಜಾರಿಗೆ ಬರಲು, ಪುನಃ ಸಂಸತ್ತಿನಲ್ಲಿ ಅನುಮೋದನೆಯನ್ನು ಪಡೆಯಬೇಕು. ಆದರೆ ಇದಕ್ಕೆ ನಾವು ಅನುಮೋದನೆ ನೀಡುವುದಿಲ್ಲ. ಚೀನಾವನ್ನು ನಾವು ವಸಾಹತುಶಾಹಿ ಹಾಗೂ ಭೂ ಕಬಳಿಕೆದಾರನ ರೀತಿ ನೋಡುತ್ತೇವೆ ಎಂದು ನಶೀದ್ ತೀವ್ರವಾಗಿ ಟೀಕಿಸಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಮೊದಲ ಬಾರಿಗೆ ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಯಾದ ಅಧ್ಯಕ್ಷರಾಗಿದ್ದು, ಇವರನ್ನು ಸೇನಾ ದಂಗೆಯಿಂದ ಪದಚ್ಯುತಗೊಳಿಸಲಾಗಿತ್ತು. ಗಡಿಪಾರು ಮಾಡಿದ ನಂತರ ಅಂತಾರಾಷ್ಟ್ರೀಯ ಕೋರ್ಟ್‌ನಲ್ಲಿ ಸೇನಾ ದಂಗೆ ಹಾಗೂ ತಮ್ಮ ವಿರುದ್ಧದ ಪ್ರಕರಣದ ಬಗ್ಗೆ ಹೋರಾಟವನ್ನೂ ಇವರು ನಡೆಸಿದ್ದರು.
ಒಂದೆಡೆ, ಚೀನಾದ ವಿರುದ್ಧ ನಶೀದ್ ಕಟುವಾದ ಶಬ್ದಗಳಲ್ಲಿ ಟೀಕೆ ಮಾಡುತ್ತಿದ್ದಾರೆ. ಆದರೆ, ಚೀನಾದ ಅಧ್ಯಕ್ಷರು ಭಾರತ ಮತ್ತು ಬೀಜಿಂಗ್ ಮಧ್ಯೆ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತ, ಚೀನಾ ವಿರುದ್ಧ ಇವರಷ್ಟು ಕಟುವಾದ ಮಾತುಗಳನ್ನು ಆಡದೇ ಮೃದು ಧೋರಣೆಯಲ್ಲಿ ಮಾತನಾಡುತ್ತಿದ್ದಾರೆ. ಇಬ್ಬರ ನಿಲುವಿನ ಮಧ್ಯೆ ಗಮನಾರ್ಹವಾದ ವ್ಯತ್ಯಾಸವಿದೆಯಲ್ಲವೇ ಎಂದು ಕೇಳಿದ ಪ್ರಶ್ನೆಗೆ ಅವರು ಜಾಣತನದಿಂದ ಪ್ರತಿಕ್ರಿಯಿಸಿದ್ದಾರೆ. ಈ ಭಿನ್ನ ನಿಲುವಿನಿಂದ ನನಗೆ ಬೇಸರವಾಗಿಲ್ಲ. ತಾನು ಈ ದೇಶವನ್ನು ಈ ಹಿಂದೆ ಮುನ್ನಡೆಸಿದ್ದೇನೆ. ಹೀಗಾಗಿ ನೈಜವಾದ ರಾಜಕಾರಣವು ಚುನಾವಣಾ ರಾಜಕೀಯಕ್ಕಿಂತ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ.
ಭಾರತವು ಮಾಲ್ಡೀವ್ಸ್‌ಗೆ ನೀಡಿರುವ 1 ಬಿಲಿಯನ್ ಡಾಲರ್ ಸಾಲದ ಅಡಿಯಲ್ಲಿ ಕೈಗೊಳ್ಳುತ್ತಿರುವ ಅಭಿವೃದ್ಧಿ ಯೋಜನೆಗಳ ವೇಗವನ್ನು ಹೆಚ್ಚಿಸುವಂತೆ ಭಾರತವನ್ನು ಅವರು ಕೋರಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಮಾತುಕತೆಯಲ್ಲಿ ನಶೀದ್ ಅವರು ಕೇಳಿಕೊಂಡಿದ್ದಾರೆ. ಇದೇ ವೇಳೆ ಮಾಲ್ಡೀವ್ಸ್‌ನಲ್ಲಿ ಇಸ್ಲಾಂ ಮೂಲಭೂತವಾದದ ಹೆಚ್ಚುತ್ತಿರುವ ಬಗ್ಗೆಯೂ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ. ಮಾಲ್ಡೀವ್ಸ್ ಸಮುದ್ರದಲ್ಲಿ ಅಲ್ ಖೈದಾಗೆ ಸಂಬಂಧ ಹೊಂದಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿದ್ದೂ ಇವರ ಆತಂಕಕ್ಕೆ ಕಾರಣವಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ ಮಾಲ್ಡೀವ್ಸ್‌ನ ಸುಮಾರು 250 ಜನರು ಇಸ್ಲಾಮಿಕ್ ಸ್ಟೇಟ್ಸ್ ಉಗ್ರ ಸಂಘಟನೆಗಳಲ್ಲಿ ಉಗ್ರರಾಗಿ ಸೇರಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಭಾರತದ ವಿವಾದಿತ ದ್ವೇಷ ಭಾಷಣಕಾರ ಝಾಕೀರ್ ನಾಯ್ಕ್‌ಗೆ ಮುಸ್ಲಿಂ ಬಹುತ್ವದ ರಾಷ್ಟ್ರ ಮಲೇಷ್ಯಾದಲ್ಲಿ ಆಶ್ರಯ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಾಲ್ಡೀವ್ಸ್‌ಗೆ ಆಗಮಿಸದಂತೆ ಝಾಕೀರ್ ನಾಯ್ಕ್‌ಗೆ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಈ ಬೆಳವಣಿಗೆಗಳ ಕುರಿತು ಅವರು ಆತಂಕಗಳನ್ನೂ ವ್ಯಕ್ತಪಡಿಸಿದ್ದಾರೆ. ಈಟಿವಿ ಭಾರತ್ ಜೊತೆಗೆ ವಿಶೇಷವಾಗಿ ಮಾತನಾಡಿದ ನಶೀದ್, ಭಾರತ ಸರ್ಕಾರವು ಹೊರತಂದ ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಇದು ಭಾರತದ ಆಂತರಿಕ ರಾಜಕೀಯದ ಕುರಿತಾದ ಸಂಗತಿ. ನಮಗೂ ಈ ಪೌರತ್ವ ತಿದ್ದುಪಡಿ ಮಸೂದೆಗೂ ಯಾವುದೇ ಸಂಬಂಧವಿಲ್ಲ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಮಗೆ ನಂಬಿಕೆ ಇದೆ.
ನಿಮ್ಮ ಸಂಸತ್ತು ಯಾವುದೇ ಕ್ರಮ ಕೈಗೊಂಡಿದೆ ಎಂದಾದರೆ, ಅದು ಸೂಕ್ತ ಪೂರ್ವ ತಯಾರಿಯನ್ನು ಮಾಡಿಕೊಂಡೇ ಜಾರಿಗೊಳಿಸಿದೆ ಎಂದು ನಾವು ನಂಬಿದ್ದೇವೆ. ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಕ್ರಮ ಎಂಬುದು ನನಗೆ ತಿಳಿದಿದೆ. ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಕ್ರಮಗಳನ್ನು ಪೂರೈಸುತ್ತೀರಿ ಎಂಬ ಭರವಸೆಯ ಮೇಲೆಯೇ ಜನರು ಸರ್ಕಾರವನ್ನು ಆರಿಸಿ ತರುತ್ತಾರೆ ಎಂದು ಹೇಳಿದ್ದಾರೆ. ಈ ಮಸೂದೆಯ ಕುರಿತು ಈಶಾನ್ಯದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಇದು ಹಿಂಸೆಗೂ ತಿರುಗಿದೆ. ಅಲ್ಪಸಂಖ್ಯಾತ ಮುಸ್ಲಿಮರನ್ನು ತಾರತಮ್ಯ ಮಾಡುತ್ತಿದೆ ಎಂಬ ಕಾರಣಕ್ಕೂ ಪ್ರತಿಭಟನೆ ನಡೆಯುತ್ತಿದೆ.
ಸಾರ್ಕ್ ಸಂಘಟನೆಯ ಭವಿಷ್ಯ ಕ್ಷೀಣಿಸಿದಂತೆ ಕಾಣಿಸುತ್ತಿದ್ದು, ಪ್ರಾಂತೀಯ ಸಹಕಾರದ ವಿಚಾರಕ್ಕೆ ಇನ್ನೂ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದು ನಶೀದ್ ಆಗ್ರಹಿಸಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಮುಂದಿನ ಸಾರ್ಕ್ ಸಮ್ಮೇಳನವನ್ನು ನಡೆಸುವುದು ಈ ನಿಟ್ಟಿನಲ್ಲಿ ಹೊಸ ಶಕೆಗೆ ನಾಂದಿ ಹಾಡಲಿದೆ. 2016 ರಲ್ಲಿ ಉರಿಯಲ್ಲಿ ಉಗ್ರ ದಾಳಿ ನಡೆದಿದ್ದರಿಂದಾಗಿ ಭಾರತದ ನೇತೃತ್ವದಲ್ಲಿ ಬಹುತೇಕ ದಕ್ಷಿಣ ಏಷ್ಯಾ ರಾಷ್ಟ್ರಗಳು ಸಾರ್ಕ್ ಸಮ್ಮೇಳನವನ್ನು ಬಹಿಷ್ಕರಿಸಿದ್ದವು.
ಅಂದಿನಿಂದಲೂ ಸಾರ್ಕ್ ಸಮ್ಮೇಳನ ನಡೆದಿಲ್ಲ ಮತ್ತು ಸಾರ್ಕ್ ಸಂಘಟನೆಯ ಭವಿಷ್ಯವೂ ಅಲುಗಾಡುತ್ತಿದೆ. ಇದೇ ರೀತಿಯಲ್ಲಿ ಈ ಸಂಘಟನೆಯ ಭವಿಷ್ಯವನ್ನು ಅತಂತ್ರದಲ್ಲಿ ಇಡುವುದು ಒಳ್ಳೆಯದಲ್ಲ. ಪ್ರಾಂತೀಯ ಸಹಕಾರದ ವಿಚಾರದಲ್ಲಿ ಮತ್ತೊಂದು ಪರ್ಯಾಯ ವ್ಯವಸ್ಥೆಯನ್ನು ನಾವು ಕೊಂಡುಕೊಳ್ಳುವವರೆಗೆ ಸಾರ್ಕ್ ಅನ್ನು ಮುಂದುವರಿಸುವುದು ಅತ್ಯಂತ ಕಷ್ಟಕರ ಎಂಬಂತೆ ಕಾಣುತ್ತಿದೆ.
ಮುಂದಿನ ಸಾರ್ಕ್ ಸಮ್ಮೇಳನವನ್ನು ಮಾಲ್ಡೀವ್ಸ್‌ನಲ್ಲಿ ನಡೆಸುವುದು ಕೂಡ ಕಷ್ಟಕರವಾಗಿದೆ. ಎಲ್ಲ ದೇಶಗಳನ್ನೂ ಒಂದೇ ವೇದಿಕೆಯಲ್ಲಿ ಸೇರಿಸುವುದು ಸುಲಭ ಸಾಧ್ಯವೂ ಅಲ್ಲ. ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ಫಲ ನೀಡುತ್ತಿಲ್ಲ. ಹೀಗಾಗಿ ಸಾರ್ಕ್ ಭವಿಷ್ಯದ ಬಗ್ಗೆ ನಾವು ಗಂಭೀರವಾಗಿ ಚಿಂತನೆ ನಡೆಸಬೇಕು. ಹೀಗಾಗಿ ಈ ಕುರಿತು ಮಾತುಕತೆ ನಡೆಸೋಣ. ಈ ಮಾತುಕತೆಯಲ್ಲಿ ಯಾವ ಫಲಿತಾಂಶ ಹೊರಬರುತ್ತದೆ ಎಂದು ಕಾಯೋಣ ಎಂದು ನಶೀದ್ ಈ ವೇಳೆ ಹೇಳಿದ್ದಾರೆ.