ನವದೆಹಲಿ: ಗಾಲ್ವಾನ್ ವ್ಯಾಲಿಯಲ್ಲಿ ನಡೆದ ಇಂಡೋ-ಚೀನಾ ಘರ್ಷಣೆಯ ಬಳಿಕ ಬಂಧನಕ್ಕೊಳಗಾಗಿದ್ದ ನಾಲ್ವರು ಅಧಿಕಾರಿಗಳು ಸೇರಿದಂತೆ ಭಾರತದ 10 ಸೈನಿಕರನ್ನು ಚೀನಾ ಇಂದು ಬಿಡುಗಡೆಗೊಳಿಸಿದೆ.
ಜೂನ್ 15 ಮತ್ತು 16 ರಂದು ಉಭಯ ರಾಷ್ಟ್ರಗಳ ಸೈನಿಕರು ಗಾಲ್ವಾನ್ ವ್ಯಾಲಿಯಲ್ಲಿ ಮುಖಾಮುಖಿಯಾದ ವೇಳೆ ಘರ್ಷಣೆ ಸಂಭವಿಸಿ ಕರ್ನಲ್ ಸಂತೋಷ್ ಬಾಬು ಸೇರಿದಂತೆ ಬಿಹಾರ 16 ನೇ ರೆಜಿಮೆಂಟ್ನ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಚೀನಾದ ಕೆಲವು ಸೈನಿಕರು ಸಾವನ್ನಪ್ಪಿದ್ದರು. ಈ ವೇಳೆ ಅಧಿಕಾರಿಗಳು ಮತ್ತು ಸೈನಿಕರನ್ನು ಚೀನಾ ಬಂಧಿಸಿತ್ತು.
ನಂತರ ಭಾರತ ಮತ್ತು ಚೀನಾದ ಉನ್ನತ ಮಟ್ಟದ ಅಧಿಕಾರಿಗಳು ಮಾತುಕತೆ ನಡೆಸಿದ್ದರು. ಇದರ ಪರಿಣಾಮವಾಗಿ ಬಂಧಿಸಿದ್ದ ಭಾರತೀಯ ಸೈನಿಕರನ್ನು ಬಿಡುಗಡೆಗೊಳಿಸಲಾಗಿದೆ. ಚೀನಾ ಜೊತೆಗಿನ ಮಾತುಕತೆಯಲ್ಲಿ ಭಾರತೀಯ ಸೈನ್ಯದ ಮೂರು ವಿಭಾಗಗಳ ಕಮಾಂಡರ್ಗಳು ಪಾಲ್ಗೊಂಡಿದ್ದರು.