ನವದೆಹಲಿ : ಗಾಲ್ವಾನ್ ಸಂಘರ್ಷದ ನಂತರ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ ಚೀನಾ ಎಲ್ಎಸಿ ಪ್ರದೇಶದಲ್ಲಿ ಮಿಲಿಟರಿ ಶಿಬಿರಗಳನ್ನು ಸ್ಥಾಪಿಸುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಗಾಲ್ವಾನ್ ಮಾತ್ರವಲ್ಲದೇ 2017ರ ದೋಕ್ಲಾಂ ಬಿಕ್ಕಟ್ಟಿನ ನಂತರ ಚೀನಾ ತನ್ನ ಸಾಮರ್ಥ್ಯವನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದೆ ಎಂದು ಅಂದಾಜಿಲಾಗಿದೆ. ಈಗ ಎಲ್ಎಸಿಯ ಕೆಲ ಪ್ರದೇಶಗಳಲ್ಲಿ 20ಕ್ಕೂ ಹೆಚ್ಚು ಮಂದಿಯಿರುವ ಕೆಲ ಶಿಬಿರಗಳನ್ನು ಗಮನಿಸಲಾಗಿದೆ.
ಏಪ್ರಿಲ್ ಹಾಗೂ ಮೇ ತಿಂಗಳಿಂದ ಒಂದೇ ಸ್ಥಾನದಲ್ಲಿ ಎರಡೂ ರಾಷ್ಟ್ರಗಳ ಸೇನೆಗಳನ್ನು ಲಡಾಖ್ನ ಎತ್ತರ ಪ್ರದೇಶಗಳಲ್ಲಿ ನಿಯೋಜನೆ ಮಾಡಲಾಗಿದೆ. ಚೀನಾದ ಕಡೆಗಿರುವ ಕೆಳಗಿನ ಪ್ರದೇಶದ ಕೆಲ ಶಿಬಿರಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮಾತುಕತೆ ನಡುವೆ ಬೆನ್ನಿಗಿರಿದ 'ಛೀ'ನಾ: ಅರುಣಾಚಲ ಬಳಿ ಮೂರು ಗ್ರಾಮಗಳ ಸ್ಥಾಪನೆ!
ಇಂತಹ ಶಿಬಿರಗಳು ಚೀನಾದ ಸೈನ್ಯಕ್ಕೆ ತಮ್ಮ ಎಲ್‌ಎಸಿಯಲ್ಲಿ ಗಸ್ತು ತಿರುಗಲು ಮತ್ತು ಗಡಿ ಪ್ರದೇಶಗಳಲ್ಲಿ ಕೆಲ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿವೆ ಎಂದು ಸೇನೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಭೂತಾನ್ನಲ್ಲಿ ಚೀನಾದ ರಸ್ತೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಆಕ್ಷೇಪಿಸಿದಾಗ ಡೋಕ್ಲಾಮ್ ಬಿಕ್ಕಟ್ಟು ಏರ್ಪಟ್ಟಿದ್ದು, ಎರಡು ತಿಂಗಳ ನಂತರ ಈ ಸಮಸ್ಯೆ ಬಗೆಹರಿದಿತ್ತು. ಆಗಿನಿಂದಲೂ ಚೀನಾ ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡು ಬರುತ್ತಿದ್ದು, ಈಗ ಶಿಬಿರಗಳ ಸ್ಥಾಪನೆಗೆ ಮುಂದಾಗಿದೆ.
ಈಗ ಗಾಲ್ವಾನ್ ಸಂಘರ್ಷದ ನಂತರ ಚೀನಾ ಭಾರಿ ಫಿರಂಗಿ, ಕ್ಷಿಪಣಿಗಳು, ಶಸ್ತ್ರಸಜ್ಜಿತ ಸೇನೆ ಜೊತೆಗೆ ಸುಮಾರು 60 ಸಾವಿರ ಸೈನಿಕರನ್ನು ಗಡಿಗೆ ತಲುಪಿಸಿದೆ. ಭಾರತವೂ ಕೂಡ ಅದಕ್ಕೆ ಪ್ರತಿಕ್ರಿಯೆಯಾಗಿ ಕೆಲ ಭಾಗಗಳಿಗೆ ಸೇನೆ ರವಾನಿಸಿದೆ.