ನಾಗರ್ ಕರ್ನೂಲ್: ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಾಗಿ ಮಗುವಿನ ದೇಹ ತಾಯಿಯ ಹೊಟ್ಟೆಯಲ್ಲೇ ಉಳಿದು ತಲೆ ಮಾತ್ರ ಹೊರಗೆ ಬಂದಿರುವ ಘಟನೆ ನಾಗರ್ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಅಚ್ಚಂಪೇಟ್ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಸಡಿಂಪಲ್ಲಿ ಗ್ರಾಮದ ಸ್ವಾತಿ 3 ದಿನಗಳ ಹಿಂದೆ ದಾಖಲಾಗಿದ್ದರು. ಸಹಜ ಹೆರಿಗೆ ಆಗುತ್ತದೆ ಎಂದು ವೈದ್ಯರು ಆಕೆಯ ಕುಟುಂಬಸ್ಥರಿಗೆ ಹೇಳಿದ್ದರು ಎನ್ನಲಾಗ್ತಿದೆ.
ಮೂರನೇ ದಿನಕ್ಕೆ ವೈದ್ಯರು ಡೆಲಿವರಿ ಮಾಡಿಸುವ ಸಂದರ್ಭದಲ್ಲಿ ಮಗುವಿನ ರುಂಡ ಮಾತ್ರ ಹೊರಗೆ ತೆಗೆದು, ಮುಂಡ ಹೊಟ್ಟೆಯಲ್ಲೇ ಬಿಟ್ಟಿದ್ದಾರೆ. ಇನ್ನು, ಮಹಿಳೆಯ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೂಡಲೇ ವೈದ್ಯರು ಆಪರೇಷನ್ ಮೂಲಕ ತಾಯಿಯ ಹೊಟ್ಟೆಯಲ್ಲಿದ್ದ ಮಗುವಿನ ತಲೆಯಿಲ್ಲದ ದೇಹವನ್ನು ಹೊರಗೆ ತೆಗೆದರು. ಆದ್ರೆ ಆ ತಾಯಿಯ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಇನ್ನು, ಈ ವಿಷಯ ತಿಳಿದ ಆಕೆಯ ಕುಟುಂಬಸ್ಥರು ಆಸ್ಪತ್ರೆಯಲ್ಲಿದ್ದ ವೈದ್ಯನ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.