ನವದೆಹಲಿ: ಸೇನಾ ಮುಖ್ಯಸ್ಥರ ಹುದ್ದೆಯಿಂದ ನಿವೃತ್ತಿಗೊಂಡಿರುವ ಜನರಲ್ ಬಿಪಿನ್ ರಾವತ್ ದೇಶದ ಮೊದಲ ಸಿಡಿಎಸ್ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್) ಆಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ದೇಶದ ಭದ್ರತೆಗಿರುವ ಮೂರೂ ಸೇನೆಗಳು ಒಂದು ತಂಡವಾಗಿ ಕಾರ್ಯನಿರ್ವಹಿಸಲಿವೆ ಎಂದರು. ರಾವತ್ ಅವರು ರಾಜಕೀಯ ಒಲವು ಹೊಂದಿದ್ದಾರೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ರಾಜಕೀಯದಿಂದ ಬಹಳ ದೂರ ಇರುತ್ತೇವೆ. ಅಧಿಕಾರದಲ್ಲಿರುವ ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ ನಾವು ಕೆಲಸ ಮಾಡಬೇಕು ಎಂದಿದ್ದಾರೆ.
ನೂತನವಾಗಿ ಆಯ್ಕೆಯಾಗಿರುವ ಭಾರತದ ಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರಿಗೆ ಪ್ರಧಾನಿ ಮೋದಿ ಶುಭ ಕೋರಿದ್ದಾರೆ. ನೀವು ಭಾರತದ ಮೊದಲ ಸಿಡಿಎಸ್ ಆಗಿ ಅಧಿಕಾರ ಸ್ವೀಕರಿಸುತ್ತಿರುವುದು ನನಗೆ ಖುಷಿಯಾಗಿದೆ. ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಬಿಪಿನ್ ರಾವತ್ ಅವರು ಭಾರತಕ್ಕೆ ಸೇವೆ ಸಲ್ಲಿಸಿದ ಮಹೋನ್ನತ ಅಧಿಕಾರಿ ಎಂದು ಗುಣಗಾನ ಮಾಡಿದ್ದಾರೆ.
ಸೇನಾ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರನ್ನು ಸಿಡಿಎಸ್ ಆಗಿ ಕೇಂದ್ರ ಸರ್ಕಾರ ಡಿಸೆಂಬರ್ 30ರಂದು ಆಯ್ಕೆ ಮಾಡಿತ್ತು. ನಿನ್ನೆಯಷ್ಟೇ ಭೂಸೇನಾ ಮುಖ್ಯಸ್ಥ ಹುದ್ದೆಯಿಂದ ನಿವೃತ್ತಿ ಹೊಂದಿದ್ದ ಜನರಲ್ ಬಿಪಿನ್ ರಾವತ್ ಇಂದು ಸಿಡಿಎಸ್ ಆಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.