ನವದೆಹಲಿ: ದೆಹಲಿ ಗಡಿಗಳಲ್ಲಿ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆ 24ನೇ ದಿನಕ್ಕೆ ಕಾಲಿಟ್ಟಿದೆ. ಇತ್ತ ಪ್ರತಿಭಟನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆ ವಿರುದ್ಧ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಕಿಡಿ ಕಾರಿದ್ದಾರೆ.
"ಪ್ರತಿಪಕ್ಷಗಳು ಸುಳ್ಳನ್ನು ಹರಡುತ್ತಿವೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಅವರು ಬೇಕಿದ್ದರೆ ಈ ಮೂರು ವಿಚಾರಗಳಿಗೆ ಪ್ರತಿಕ್ರಿಯೆ ನೀಡಬಹುದು" ಎಂದು ಚಿದಂಬರಂ ತಮ್ಮ ಟ್ಟಿಟರ್ ಖಾತೆಯಲ್ಲಿ ಮೂರು ವಿಷಯಗಳನ್ನು ಪ್ರಶ್ನಿಸಿದ್ದಾರೆ.
1. "ಪ್ರತಿ ಕ್ವಿಂಟಾಲ್ ಭತ್ತಕ್ಕೆ 1,870 ರೂ. ಕನಿಷ್ಠ ಬೆಂಬಲ ಬೆಲೆ ಇರುವಾಗ ರೈತರು 900 ರೂ. ಗೆ ಭತ್ತವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ರೈತರ ಪ್ರತಿಭಟನೆಗೆ ಸಾಥ್ ನೀಡುವ ಎಐಕೆಎಸ್ಸಿಸಿ (ಆಲ್ ಇಂಡಿಯಾ ಕಿಸಾನ್ ಸಂಘರ್ಷ ಸಮಿತಿ) ಹೇಳಿದೆ. ಇದು ಸುಳ್ಳೇ?"
2. "ತಬ್ಲಿಘಿ ಜಮಾತ್ ಸದಸ್ಯರನ್ನು ಖುಲಾಸೆಗೊಳಿಸಿದ ದೆಹಲಿ ನ್ಯಾಯಾಲಯವು ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಆರೋಪಿಗಳನ್ನು ದುರುದ್ದೇಶಪೂರಿತವಾಗಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಎಂದು ಹೇಳಿದೆ. ಅದು ಸುಳ್ಳೇ?"
3. "ಉತ್ತರ ಪ್ರದೇಶ ಪೊಲೀಸರನ್ನು ವಿರೋಧಿಸಿರುವ ಸಿಬಿಐ, ಹಥ್ರಾಸ್ ಸಂತ್ರಸ್ತೆಯ ಅತ್ಯಾಚಾರ ಹಾಗೂ ಕೊಲೆ ಆರೋಪವನ್ನು ನಾಲ್ವರು ಆರೋಪಿಗಳ ಮೇಲೆ ಹೊರಿಸಿದೆ. ಇದು ಸುಳ್ಳೇ? " ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಓದಿ: ಇಂದು ಕೃಷಿ ಕಾನೂನು ವಿರೋಧಿಸುವವರು, ತಮ್ಮ ಸರ್ಕಾರದ ಅವಧಿಯಲ್ಲಿ ಬೆಂಬಲಿಸಿದ್ದರು : ಪ್ರಧಾನಿ ಮೋದಿ
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ 'ಕಿಸಾನ್ ಮಹಾಸಮ್ಮೇಳನ'ದಲ್ಲಿ ಮಾತನಾಡಿದ್ದ ಪಿಎಂ ಮೋದಿ, ಪ್ರತಿಪಕ್ಷಗಳು ರೈತರ ಹೆಗಲನ್ನು ತಮ್ಮ ಸರ್ಕಾರದ ಮೇಲೆ ಆಕ್ರಮಣ ಮಾಡಲು ಬಳಸುತ್ತಿವೆ. ಗೊಂದಲ ಮತ್ತು ಸುಳ್ಳಿನ ಜಾಲವನ್ನು ರಚಿಸುವ ಮೂಲಕ ಕಳೆದುಹೋದ ರಾಜಕೀಯ ನೆಲೆಯನ್ನು ಮರಳಿ ಪಡೆಯಲು ವಿರೋಧ ಪಕ್ಷಗಳು ಪ್ರಯತ್ನಿಸುತ್ತಿವೆ ಎಂದು ಹೇಳಿದ್ದರು.