ರಾಯ್ಪುರ: ಛತ್ತೀಸ್ಗಡದ ಮೊದಲ ಮುಖ್ಯಮಂತ್ರಿ, ಹಾಲಿ ಶಾಸಕರಾಗಿದ್ದ ಅಜಿತ್ ಜೋಗಿ ನಿಧನರಾಗಿದ್ದಾರೆ. ಇವರಿಗೆ 74 ವರ್ಷ ವಯಸ್ಸಾಗಿತ್ತು. ಇಂದು ಮಧ್ಯಾಹ್ನ 3:30ಕ್ಕೆ ಕೊನೆಯುಸಿರೆಳೆದಿದ್ದಾರೆ.
2000 ದಿಂದ 2003ರವರೆಗೆ ಛತ್ತೀಸ್ಗಡದ ಮೊದಲ ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದ ಅಜಿತ್ ಜೋಗಿ, ಮೇ 9 ರಂದು ತಮ್ಮ ಮನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅವರನ್ನು ಕೂಡಲೇ ರಾಯ್ಪುರದ ಶ್ರೀನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೋಗಿಗೆ ಹೃದಯಸ್ತಂಭನವಾಗಿತ್ತು ಎಂದು ವೈದ್ಯರು ತಿಳಿಸಿದ್ದರು. ಅಂದೇ ಅವರನ್ನು ವೆಂಟಿಲೇಟರ್ನಲ್ಲಿಡಲಾಗಿತ್ತು. ಕೋಮಾಗೆ ಜಾರಿದ್ದ ಅಜಿತ್ ಜೋಗಿಯವರ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿತ್ತು. ಹೀಗಾಗಿ ಮೆದುಳಿಗೆ ಆಕ್ಸಿಜನ್ ಪೂರೈಕೆಯಾಗುತ್ತಿರಲಿಲ್ಲ.
ಹುಣಸೆ ಹಣ್ಣಿನ ಬೀಜ ಕೂಡ ಅವರ ಗಂಟಲಿನಲ್ಲಿ ಸಿಲುಕಿಕೊಂಡಿತ್ತು. ಹೀಗಾಗಿ ಅಜಿತ್ ಜೋಗಿಯವರ ಉಸಿರು ಬಹುತೇಕ ನಿಂತು ಹೋಗಿತ್ತು. ವೈದ್ಯರು ಎಷ್ಟು ಪ್ರಯತ್ನ ಪಟ್ಟರೂ ಅಜಿತ್ ಜೋಗಿ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲ. ಆಡಿಯೋ ಥೆರಪಿ ಕೂಡ ನೀಡಲಾಗಿತ್ತು. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ. ಆಸ್ಪತ್ರೆಯಲ್ಲಿ ಪುತ್ರ ಅಮಿತ್ ಜೋಗಿ, ಅಜಿತ್ ಜೋಗಿ ಪತ್ನಿ ರೇಣು ಜೋಗಿ ಅವರು ಆರೈಕೆಯಲ್ಲಿ ತೊಡಗಿದ್ದರು. ವೈದ್ಯರು ಕೂಡ ಎಷ್ಟೇ ಪ್ರಯತ್ನ ಪಟ್ಟರೂ ಛತ್ತೀಸ್ಗಡ ರಾಜಕೀಯದ ನಕ್ಷತ್ರವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಛತ್ತೀಸ್ಗಡ ರಾಜ್ಯ ಉದಯವಾದಾಗ 2000ನೇ ವರ್ಷದಲ್ಲಿ ಅಜಿತ್ ಜೋಗಿ ಅವರು ಮೊಟ್ಟ ಮೊದಲ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್ ನಾಯಕರಾಗಿದ್ದ ಅವರನ್ನು ಕೆಲ ವರ್ಷಗಳ ಹಿಂದೆ ಉಚ್ಛಾಟಿಸಲಾಗಿತ್ತು. ಆ ನಂತರ ಅವರು ಜನತಾ ಕಾಂಗ್ರೆಸ್ ಪಕ್ಷ ಸ್ಥಾಪಿಸಿದ್ದರು. ಅವರ ಮಗ ಅಮಿತ್ ಜೋಗಿ ಕೂಡ ರಾಜಕಾರಣದಲ್ಲಿದ್ದಾರೆ. ಜೋಗಿ ಅವರು ರಾಜಕಾರಣಕ್ಕೆ ಬರುವ ಮೊದಲು ಸರ್ಕಾರಿ ಅಧಿಕಾರಿಯಾಗಿದ್ದರು.