ರಾಯ್‌ಪುರ: ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆಗಳ ಜೊತೆ ನಡೆದ ಗುಂಡಿನ ಕಾಳಗದಲ್ಲಿ ನಾಲ್ವರು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿವಿಧ ಭದ್ರತಾ ಪಡೆಗಳ ಜಂಟಿ ತಂಡಗಳು ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದಾಗ ಬೆಳಗ್ಗೆ 9.30ರ ಸುಮಾರಿಗೆ ಜಗರ್‌ಗುಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕಾಡಿನಲ್ಲಿ ಗುಂಡಿನ ಕಾಳಗ ನಡೆದಿದೆ ಎಂದು ಬಸ್ತಾರ್ ಶ್ರೇಣಿಯ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಂದರ್ ರಾಜ್ ತಿಳಿಸಿದ್ದಾರೆ.
ಜಗರ್‌ಗುಂಡದ ಪ್ರದೇಶಗಳಲ್ಲಿ ನಕ್ಸಲರಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕ ನಂತರ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ), ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ಮತ್ತು ಕೋಬ್ರಾ ಸೇರಿದಂತೆ ವಿವಿಧ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆಗೆ ಇಳಿದಿವೆ ಎಂದು ತಿಳಿಸಿದರು.
ಗುಂಡಿನ ದಾಳಿ ಮುಗಿದ ನಂತರ ಸ್ಥಳದಲ್ಲಿ ನಾಲ್ವರ ಶವಗಳನ್ನು ಪತ್ತೆಯಾಗಿವೆ. 303 ರೈಫಲ್ ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕಾರ್ಯಾಚರಣೆ ಮುಂದುವರೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.