ಹೈದರಾಬಾದ್ (ತೆಲಂಗಾಣ): ಪಾಕಿಸ್ತಾನ ಪ್ರಜೆಯೊಬ್ಬರಿಂದ ಮೋಸ ಹೋಗಿ ಸುಮಾರು ಮೂರು ವರ್ಷಗಳ ಕಾಲ ಸೌದಿ ಅರೇಬಿಯಾದ ಜೈಲಿನಲ್ಲಿದ್ದ ತನ್ನ ಪುತ್ರನನ್ನು ಮರಳಿ ಕರೆತರಲು ಹೈದರಾಬಾದ್‌ನ ಇಕ್ಬಾಲ್ ಉನ್ನಿಸಾ ಎಂಬ ಮಹಿಳೆ ಕೇಂದ್ರ ಸರ್ಕಾರದ ಸಹಾಯ ಕೋರಿದ್ದಾರೆ.
"ನನ್ನ ಮಗ ವಿಕ್ವಾರ್ ಅಹ್ಮದ್ ಪಾಕಿಸ್ತಾನಿ ಪ್ರಜೆಯೊಂದಿಗೆ ಸೇರಿ ಸಾಲ ತೆಗೆದುಕೊಂಡು, ಮರುಪಾವತಿ ಮಾಡಲು ಸಾಧ್ಯವಾಗದೇ ಜೈಲಿನಲ್ಲಿದ್ದ. ಈಗ ಆತ ಜೈಲಿನಿಂದ ಬಿಡುಗಡೆಯಾಗಿ ಸೌದಿ ಅರೇಬಿಯಾದ ದಮ್ಮಮ್‌ನಲ್ಲಿ ವಾಸಿಸುತ್ತಿದ್ದಾನೆ" ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಉನ್ನಿಸಾ ಹೇಳಿದ್ದಾರೆ.
"ನಾನು ಹೈದರಾಬಾದ್ ನಿವಾಸಿ. ನನಗೆ ಮೂವರು ಪುತ್ರಿಯರು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ. ಈ ವರ್ಷ ರಂಜಾನ್ ಹಬ್ಬದಲ್ಲಿ ನಾನು ಒಬ್ಬ ಮಗನನ್ನು ಕಳೆದುಕೊಂಡೆ. ಎರಡನೇ ಮಗ ವಿಕ್ವಾರ್ ಅಹ್ಮದ್ 7 ವರ್ಷಗಳ ಹಿಂದೆ ಸೌದಿ ಅರೇಬಿಯಾಕ್ಕೆ ಹೋಗಿದ್ದ. ಅವನು ಅಲ್ಲಿನ ಎಲೆಕ್ಟ್ರಾನಿಕ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ" ಎಂದು ಅವರು ಹೇಳಿದರು.
"ಪಾಕಿಸ್ತಾನಿ ವ್ಯಕ್ತಿಯೊಂದಿಗೆ ಸೇರಿ ಆತ ವ್ಯವಹಾರ ಪ್ರಾರಂಭಿಸಿದ್ದ. ಇಬ್ಬರೂ ಸೇರಿ ಸಾಲ ಪಡೆದಿದ್ದರು. ಆದರೆ ಪಾಕ್ ವ್ಯಕ್ತಿ ವಂಚನೆ ಮಾಡಿದ ಕಾರಣ ಮಗ ಸಾಲ ಮರುಪಾವತಿಸಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಅವನನ್ನು ಜೈಲಿಗೆ ಕಳುಹಿಸಲಾಗಿತ್ತು. ಎರಡು ವರ್ಷ, ಎಂಟು ತಿಂಗಳು ಅವನು ಜೈಲಿನಲ್ಲೇ ಕಳೆದಿದ್ದಾನೆ" ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಕೇಂದ್ರದ ಸಹಾಯಕ್ಕಾಗಿ ಮನವಿ ಮಾಡಿದ ಅವರು, "ನಾನು ನನ್ನ ಮಗನನ್ನು ಭೇಟಿಯಾಗಿ 7 ವರ್ಷಗಳಾಗಿವೆ. ಮಗನನ್ನು ಭೇಟಿಯಾಗಲು ಮತ್ತು ಅವನನ್ನು ಭಾರತಕ್ಕೆ ಕರೆತರಲು ನನಗೆ ಸಹಾಯ ಮಾಡಬೇಕೆಂದು ಭಾರತೀಯ ರಾಯಭಾರ ಕಚೇರಿ ಮತ್ತು ಭಾರತ ಸರ್ಕಾರವನ್ನು ವಿನಂತಿಸುತ್ತೇನೆ" ಎಂದು ಹೇಳಿದರು.