ಶ್ರೀಹರಿಕೋಟ: ಚಂದ್ರಯಾನ -2 ನೌಕೆಯನ್ನು ಭಾರತ ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ಈ ಮೂಲಕ ಚಂದ್ರನಲ್ಲಿರುವ ನೀರಿನ ಅಂಶವನ್ನು ಪತ್ತೆ ಹಚ್ಚುವ ತನ್ನ ಸಂಶೋಧನೆಯನ್ನು ಮುಂದುವರೆಸಿದೆ.
ಚಂದ್ರನ ಮಣ್ಣಿನ ಮೇಲ್ಭಾಗದಲ್ಲಿ ಹೈಡ್ರೋಜನ್-ಆಮ್ಲಜನಕ ಹಾಗೂ ರಾಸಾಯನಿಕ ವಸ್ತುಗಳ ಸಂಯೋಜನೆ, 600 ಮಿಲಿಯನ್ ಮೆಟ್ರಿಕ್ ಟನ್ ಮಂಜುಗಡ್ಡೆ ಇರುವ ಸಾಧ್ಯತೆಗಳ ನಿಖರ ಮಾಹಿತಿ ಪಡೆಯಲು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ.
ಧ್ರುವಗಳ ಬಳಿಯಿರುವ ಕುಳಿಗಳಲ್ಲಿ ಮಂಜುಗಡ್ಡೆ ಇದೆ ಎಂದು ನಾಸಾ ಹೇಳುತ್ತದೆ. ದಕ್ಷಿಣ ಧ್ರುವದಲ್ಲಿರುವ ಪಳೆಯುಳಿಕೆಗಳು ಚಂದ್ರನ ಇತಿಹಾಸದ ಕುರಿತು ಬೆಳಕು ಚೆಲ್ಲುತ್ತವೆ. ಚಂದ್ರಯಾನ-1 ನೀರಿನ ಅಂಶವನ್ನು ಪತ್ತೆ ಹಚ್ಚಿದ ಹಾಗೆ ಚಂದ್ರಯಾನ-2 ಕೂಡ ದಕ್ಷಿಣ ಧ್ರುವದಲ್ಲಿ ಹೆಚ್ಚಿನ ಸಂಶೋಧನೆ ಮಾಡಲಿದೆ ಎಂಬ ಭರವಸೆ ಇದೆ ಎನ್ನುತ್ತಾರೆ ಇಸ್ರೋ ಅಧ್ಯಕ್ಷ ಕೆ. ಶಿವನ್.
ಚಂದ್ರಯಾನ-1 ಚಂದ್ರನ ಮೇಲ್ಮೈನ ಕೆಲವು ದೃಶ್ಯಗಳನ್ನು ಸೆರೆ ಹಿಡಿದಿತ್ತು. ಅವುಗಳ ಆಧಾರದ ಮೇಲೆ ಚಂದ್ರಯಾನ-2 ಸಹ ದೊಡ್ಡ ಗುಹೆಗಳನ್ನು ಸಂಶೋಧಿಸುವ ಸಾಧ್ಯತೆ ಇದೆ ಎಂದಿದ್ದಾರೆ. ಅಲ್ಲದೇ ಇದು ಮಾನವರಹಿತ ಕಾರ್ಯಾಚರಣೆಗಳಿಗೆ ಸಹಕಾರಿ ಆಗಲಿದೆ. ಏಕೆಂದರೆ ಚಂದ್ರನ ಅಂಗಳದಲ್ಲಿರುವ ಅಪಾಯಕಾರಿ ವಿಕಿರಣ, ಉಲ್ಕಾಶಿಲೆ, ವಿಪರೀತ ತಾಪಮಾನ ಮತ್ತು ಧೂಳಿನ ಬಿರುಗಾಳಿಯಿಂದಾಗಿ ಮನುಷ್ಯರು ಬದುಕುವುದು ಕಷ್ಟವಾಗಲಿದೆ ಎಂಬುದು ವಿಜ್ಞಾನಿಗಳ ಅಭಿಮತ.
13 ಪೇಲೋಡ್ ಮೂಲಕ ಚಂದ್ರನಲ್ಲಿಗೆ ಹೊರಟ ಚಂದ್ರಯಾನ- 2,ಚಂದ್ರನ ಸ್ಥಳಾಕೃತಿ, ಭೂಕಂಪ, ಖನಿಜ ಗುರುತಿಸುವಿಕೆ ಮತ್ತು ವಿತರಣೆ, ಮೇಲ್ಮೈ ರಾಸಾಯನಿಕ ಸಂಯೋಜನೆ, ಮಣ್ಣಿನ ಮೇಲಿನ ಥರ್ಮೋಫಿಸಿಕಲ್ ಗುಣಲಕ್ಷಣಗಳು, ಚಂದ್ರನ ವಾತಾವರಣದ ಬಗ್ಗೆ ವಿವರವಾದ ಅಧ್ಯಯನ ಮಾಡುತ್ತದೆ.