ಅಮೆರಿಕದ ಭೀತಿಯ ಹಿನ್ನೆಲೆಯಲ್ಲಿ ಗೊಂದಲಯುತ ಭಾರತವನ್ನು ತೊರೆದು ಛಾಬಹಾರ್ ಬಂದರಿನಿಂದ ಝಹೆದಾನ್‌ಗೆ ಅತ್ಯಂತ ಪ್ರಮುಖವಾಗಿ ರೈಲ್ವೆ ಸಂಪರ್ಕವನ್ನು ರೂಪಿಸಲು ಹೊರಟಿದ್ದು ರಾತ್ರಿ ಬೆಳಗಾಗುವವರೆಗೆ ನಡೆದದ್ದಲ್ಲ. ಇದು ನಿಧಾನವಾಗಿ ಬದಲಾವಣೆಯಾಗಿದೆ.
2016 ರಲ್ಲಿ ಟೆಹ್ರಾನ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದಾಗ ಭಾರತ, ಇರಾನ್ ಮತ್ತು ಅಫ್ಘಾನಿಸ್ತಾನಕ್ಕೆ ತ್ರಿಪಕ್ಷೀಯ ಸಂಪರ್ಕವನ್ನು ಒದಗಿಸುವ ರೈಲ್ವೆ ಮಾರ್ಗವನ್ನು ಒದಗಿಸಲು ಸಾಧ್ಯತೆ ವರದಿಯನ್ನು ರೂಪಿಸಲು ಭಾರತದ ರೈಲ್ವೆ ಕಂಪನಿ ಇರ್ಕಾನ್ ಒಪ್ಪಂದವನ್ನು ಮಾಡಿಕೊಂಡಿತು. ಈ ಸಂಪರ್ಕಕ್ಕೆ ಅತ್ಯಂತ ಪ್ರಮುಖ ಕೇಂದ್ರವೇ ಓಮನ್ ಸಮದ್ರದಲ್ಲಿ ಇರಾನ್‌ನ ಈಶಾನ್ಯ ಭಾಗದಲ್ಲಿರುವ ಛಾಬಹಾರ್ ಬಂದರು ಆಗಿತ್ತು.
ಹೀಗಾಗಿ, ರೈಲ್ವೆ ಲೈನ್ ನಿರ್ಮಾಣ ಮಾಡಲು ಭಾರತವು ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ಟೆಹ್ರಾನ್ ಹೇಳಿದ್ದು ಸಂಪೂರ್ಣ ವಾಸ್ತವವಲ್ಲ. ಭಾರತ ತನ್ನ ಆಸಕ್ತಿಯನ್ನು ವ್ಯಕ್ತಪಡಿಸಿದೆ. ಆದರೆ ನಿರ್ಮಾಣ ಕಾರ್ಯಕ್ಕೆ ಅಂದರೆ ರೈಲ್ವೆ ಮಾರ್ಗ ನಿರ್ಮಾಣ ಇತ್ಯಾದಿಗೆ ಮುಂದಾಗಲಿಲ್ಲ. ಭಾರತದ ರೈಲ್ವೆ ನಿರ್ಮಾಣ ಕಂಪನಿ ಇರ್ಕಾನ್ ಕೇವಲ ಸಾಧ್ಯತೆ ವರದಿಯನ್ನು ಮಾತ್ರ ಮಾಡಿದೆ. ಉಳಿದ ಕೆಲಸಕ್ಕೆ 150 ಮಿಲಿಯನ್ ಹಣ ಬೇಕಾಗಿತ್ತು ಮತ್ತು ಕೆಲಸವನ್ನು ಮುಂದುವರಿಸಬೇಕಿತ್ತು. ಹಾಗಾದರೆ, ಛಾಬಹಾರ್ ಬಂದರನ್ನು ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡಲು ಅತ್ಯಂತ ಪ್ರಮುಖವಾಗಿ ಅಗತ್ಯವಾಗಿರುವ ಭಾರತ ಯಾಕೆ ರೈಲ್ವೆ ಮಾರ್ಗಕ್ಕೆ ಅಗತ್ಯ ಹಣವನ್ನು ನೀಡಿಲ್ಲ? ಭಾರತವನ್ನು ಇರಾನ್ ಆರೋಪಿಸುವ ಮೂಲಕ ಇರಾನ್ ತನ್ನ ವ್ಯೂಹಾತ್ಮಕ ಸ್ವಾಯತ್ತೆಯನ್ನು ಪ್ರದರ್ಶಿಸುತ್ತಿಲ್ಲ ಮತ್ತು ತನ್ನ ದೇಶದ ಹಿತಾಸಕ್ತಿಗೆ ಅನುಗುಣವಾಗಿ ಮುಂದುವರಿಯುತ್ತಿಲ್ಲ. ಅಷ್ಟೇ ಅಲ್ಲ, ಇದು ಅಮೆರಿಕದ ಬೆದರಿಕೆಗೆ ತಲೆಬಾಗಿದಂತಾಗಿದೆ. ಪ್ರಾಜೆಕ್ಟ್‌ಗೆ ಹಣ ನೀಡಲು ಭಾರತ ನಿಧಾನಗತಿಯನ್ನು ಅನುಸರಿಸಿರುವುದು ಅಮೆರಿಕಕ್ಕೆ ಸಿಟ್ಟು ಬರಿಸಬಹುದು ಎಂಬ ಹೆದರಿಕೆ ಇರಬಹುದು ಎಂದು ಊಹಿಸಲಾಗಿದೆ. ಆದರೆ, ಛಾಬಹಾರ್ ಪ್ರಾಜೆಕ್ಟ್‌ಗೆ ಅಮೆರಿಕ ಒಪ್ಪಿಗೆ ನೀಡಿತ್ತು. ಯಾಕೆಂದರೆ, ಇದು ಅಫ್ಘಾನಿಸ್ತಾನದ ವ್ಯಾಪಾರ ವಹಿವಾಟು ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂಬ ಕಾರಣಕ್ಕೆ ಅಮೆರಿಕ ಇದಕ್ಕೆ ಒಪ್ಪಿಗೆ ನೀಡಿತ್ತು. ಆದರೂ ಈ ಮಧ್ಯೆ, ಪಾಕಿಸ್ತಾನವು ವಾಘಾ ಗಡಿಯವರೆಗೆ ಸರಕುಗಳನ್ನು ತರಲು ಕಾಬೂಲ್ ಸರ್ಕಾರಕ್ಕೆ ಅನುವು ಮಾಡಿದೆ. ಈ ಹಿನ್ನೆಲೆಯಲ್ಲಿ, ಭಾರತದ ಭೀತಿಯನ್ನು ಅನಗತ್ಯವಾಗಿ ಉತ್ಪ್ರೇಕ್ಷೆ ಮಾಡಲಾಗಿದೆ.
ಆದರೆ ಕಾರಣ ಬೇರೆಯೇ ಇದೆ. 370ನೇ ವಿಧಿಯನ್ನು ಹಿಂಪಡೆದಿದ್ದಕ್ಕೆ ವಿರೋಧ ಮತ್ತು ಕಾಶ್ಮೀರದ ಸ್ಥಿತಿಗತಿಯನ್ನು ಭಾರತ ಸರ್ಕಾರ ಬದಲಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಇರಾನ್‌ನಿಂದ ಭಾರತ ಅಂತರವನ್ನು ಕಾಯ್ದುಕೊಳ್ಳುತ್ತಿದೆ. ಇಸ್ಲಾಮಿಕ್ ದೇಶಗಳಲ್ಲಿ ಅತ್ಯಂತ ಸಾಮಾನ್ಯವಾದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಭಾರತದಲ್ಲಿ ಮಾಡಲಾಗುತ್ತಿದೆ ಎಂದು ಇರಾನ್ ಆಡಳಿತ ತೀವ್ರ ಟೀಕೆ ಮಾಡುತ್ತಿದೆ. ಅಷ್ಟೇ ಅಲ್ಲ, ಇರಾನ್ ಅತ್ಯುನ್ನತ ನಾಯಕ ಅಯೊತುಲ್ಲಾ ಖಮೆನೈ ಕೂಡ ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಅದು ಹೇಗೆ ಮುಸ್ಲಿಮರ ಮೇಲೆ ಪರಿಣಾಮ ಬೀರುತ್ತದೆ ಎಂಬ ಕುರಿತು ಟೀಕೆ ಮಾಡಿದ್ದಾರೆ. ಇನ್ನು, ಹಲವರು ವಾದಿಸುವಂತೆ ಯೋಜಿತ ದಂಗೆಯಾದ ದೆಹಲಿ ದಾಂಧಲೆಯನ್ನೂ ಇರಾನ್ ಟೀಕಿಸಿದೆ.
ಇರಾನ್‌ಗೆ ಕಾಶ್ಮೀರ ಅತ್ಯಂತ ಪ್ರಮುಖ ಸಂಗತಿ. ಯಾಕೆಂದರೆ ಕಾಶ್ಮೀರವನ್ನು ಅವರು “ಸಘಿರ್ ಎ ಇರಾನ್” ಅಂದರೆ ಪುಟ್ಟ ಇರಾನ್ ಎಂದು ಕರೆಯುತ್ತಾರೆ. ಕಾಶ್ಮೀರದಲ್ಲಿನ ಅಸ್ಥಿರತೆಯು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಸಂಬಂಧ ಹಳಸಲು ಕಾರಣವಾಗಿದೆ ಎಂದು ಇರಾನ್ ಭಾವಿಸಿದೆ. ರಾಜತಾಂತ್ರಿಕ ನೆರವನ್ನು ಭಾರತಕ್ಕೆ ನೀಡಿ, ಛಾಬಹಾರ್‌ನಲ್ಲಿ ವಿಶೇಷ ಸ್ಥಾನವನ್ನು ಭಾರತಕ್ಕೆ ನೀಡಿದರು. ಪಾಕಿಸ್ತಾನದ ಜೊತೆಗೆ ಸಮತೋಲನ ಸಾಧಿಸಿಕೊಳ್ಳಲು ಈ ಪ್ರಯೋಗವನ್ನು ಅವರು ಮಾಡಿದರು.
ಆದರೆ ಪಾಕಿಸ್ತಾನವನ್ನು ಬದಿಗೊತ್ತಿ, ಭಾರತದ ಜೊತೆಗೆ ಸಂಬಂಧ ಸುಧಾರಿಸಿಕೊಳ್ಳಲು ಮಾಡಿದ ಈ ಪ್ರಯತ್ನಗಳು ಇರಾನ್‌ನ ನಾಯಕ ಖಸಿಮ್ ಸುಲೇಮಾನಿ ಮೇಲೆ ವಿಪರೀತ ಒತ್ತಡವನ್ನು ಹಾಕಿತು. ಖುದ್ಸ್ ಪಡೆಯ ಮುಖ್ಯಸ್ಥರಾದ ಅವರು, ಛಾಬಹಾರ್‌ನಲ್ಲಿ ತ್ವರಿತವಾಗಿ ಪ್ರಗತಿ ಸಾಧಿಸಬೇಕು ಎಂದು ಬಯಸಿದ್ದರು. ಆದರೆ, ಈ ಮಧ್ಯೆಯೇ ಅವರನ್ನು ಅಮೆರಿಕ ಹತ್ಯೆಗೈದಿತು. ಹಾಗೆಂದ ಮಾತ್ರಕ್ಕೆ ಛಾಬಹಾರ್ ಬಂದರನ್ನು ಚೀನಾಗೆ ಇರಾನ್ ಬಿಟ್ಟುಕೊಟ್ಟಿಲ್ಲ. ಚೀನಾ ಪಾಕಿಸ್ತಾನ ಎಕಾನಮಿಕ್ ಕಾರಿಡಾರ್‌ಗೆ ಪ್ರವೇಶ ಬಿಂದುವಾದ ಪಾಕಿಸ್ತಾನದ ಗ್ವಾದಾರ್ ಬಂದರಿನಿಂದ ಕೇವಲ 70 ಕಿ.ಮೀ ದೂರದಲ್ಲಿರುವ ಛಾಬಹಾರ್ ಅನ್ನು ಚೀನಾಗೆ ನೀಡುವುದು ಇರಾನ್‌ಗೆ ಅತ್ಯಂತ ಸುಲಭದ ಸಂಗತಿಯಾಗಿತ್ತು. ಅಷ್ಟೇ ಅಲ್ಲ, ಚೀನಾ ಕೂಡ ಈ ಯೋಜನೆಯನ್ನು ಖುಷಿಯಿಂದಲೇ ಕೈಗೆತ್ತಿಕೊಳ್ಳುತ್ತಿತ್ತು. ಆದರೆ ಪಾಕಿಸ್ತಾನವನ್ನು ಬದಿಗೆ ಸರಿಸಿ ಕೇಂದ್ರೀಯ ಏಷ್ಯಾಗೆ ತೆರಳಲು ಭಾರತಕ್ಕೆ ಅಮೆರಿಕ ಸಹಾಯ ಮಾಡಬಹುದು ಎಂಬ ಕಾರಣಕ್ಕೆ ಟೆಹ್ರಾನ್ ಆತಂಕ ಹೊಂದಿದೆ. ಯಾಕೆಂದರೆ, ಭಾರತಕ್ಕೆ ಅಮೆರಿಕದ ಜೊತೆಗೆ ಉತ್ತಮ ಸಂಬಂಧವಿದೆ.
ತನ್ನ ಪುರಾತನ ನಾಗರಿಕತೆ ಮತ್ತು ಸ್ವತಂತ್ರ ವಿದೇಶಾಂಗ ನೀತಿಯ ಬಗ್ಗೆ ಗೌರವವನ್ನು ಹೊಂದಿರುವ ಇರಾನ್‌ಗೆ ಅಮೆರಿಕದ ನಿಷೇಧದ ಒತ್ತಡವಿದ್ದರೂ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳದಿರುವ ಬಗ್ಗೆ ಅತ್ಯಂತ ಎಚ್ಚರಿಕೆಯಿದೆ. ಅಮೆರಿಕ ಹೇರಿರುವ ನಿಷೇಧದಿಂದಾಗಿ ತೈಲ ರಫ್ತು ನಿಂತು ಹೋಗಿ ಹೊರ್ಮುಝ್‌ನಲ್ಲಿರುವ ಬಂದರ್ ಅಬ್ಬಾಸ್ ಸಂಪೂರ್ಣ ವಹಿವಾಟು ಕಡಿತಗೊಂಡಿರುವ ಮಧ್ಯೆಯೇ ಈ ಬಂದರಿನಲ್ಲಿ, ಅಮೆರಿಕದ ಜೊತೆಗೆ ಭಾರತದ ಸಂಬಂಧ ಚೆನ್ನಾಗಿರುವುದರಿಂದ ವಹಿವಾಟು ಮುಂದುವರಿಯಬಹುದು ಎಂದು ಇರಾನ್ ಭಾವಿಸಿದೆ. ಅಫ್ಘಾನಿಸ್ತಾನದ ಬಗ್ಗೆ ಭಾರತ ಹೊಂದಿರುವ ಕೆಲವು ಅನುಮಾನಗಳಿಂದಾಗಿ ಈ ಬಂದರಿನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಭಾರತ ಪೂರ್ಣ ಮನಸಿನಿಂದ ಒಪ್ಪಿಲ್ಲ. ತಾಲಿಬಾನ್ ಅಧಿಕಾರಕ್ಕೆ ಬಂದರೆ ಅಫ್ಘಾನಿಸ್ತಾನದಲ್ಲಿ ಮಾಡಿದ ಹೂಡಿಕೆಯ ಪರಿಸ್ಥಿತಿ ಏನಾಗುತ್ತದೆ ಎಂದು ಭಾರತಕ್ಕೆ ಆತಂಕವಿದೆ. ಯುಎಸ್ ಮಧ್ಯವರ್ತಿ ಝಲ್ಮಯ್ ಖಲ್ಜಿದ್ ಜೊತೆಗೆ ಮಾಡಿಕೊಂಡ ಹೊಸ ಒಪ್ಪಂದವು ಭಾರತದ ಹೂಡಿಕೆಯನ್ನು ರಕ್ಷಿಸುತ್ತದೆಯೇ ಎಂಬ ಆತಂಕ ಭಾರತಕ್ಕಿದೆ. ತಾಲಿಬಾನ್ ಸ್ನೇಹಹಸ್ತವನ್ನೇನೋ ಚಾಚಿದೆ. ಆದರೆ ಕಾಬೂಲ್ ಅನ್ನು ಒಮ್ಮೆ ಆಕ್ರಮಿಸಿಕೊಂಡ ನಂತರ ಏನಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ಹಿಂದೆ, ಅವರು ಕಾನೂನುಗಳಿಗೆ ಬದ್ಧವಾಗದ ದುರುಳರ ರೀತಿ ವರ್ತಿಸಿದ್ದರು. ಒಪ್ಪಂದಗಳಿಗೂ ಅವರು ಗೌರವ ನೀಡಿರಲಿಲ್ಲ. ಇದೇ ಕಾರಣಕ್ಕೆ ಭಾರತ ಸಂಪೂರ್ಣ ಸಮ್ಮತಿಯನ್ನು ವ್ಯಕ್ತಪಡಿಸಿಲ್ಲ.
ಉತ್ತರ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ಹೇಗೆ ಸಂಘರ್ಷವನ್ನು ಎದುರಿಸುತ್ತಿವೆ ಎಂಬ ಬಗ್ಗೆ ಇರಾನ್ ಕೂಡ ಗಮನಿಸುತ್ತಿದೆ. ಅಮೆರಿಕದ ಬೆಂಬಲ ಇಲ್ಲದೇ ನಾವು ನಮ್ಮ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಸಾಧ್ಯವಿಲ್ಲ ಎಂಬುದು, ಭಾರತದ ಗಡಿಯಲ್ಲಿ ಚೀನಾ ಭೂಮಿಯನ್ನು ಅತಿಕ್ರಮಿಸಿಕೊಳ್ಳಲು ಪ್ರಯತ್ನಿಸಿದ್ದು ಇರಾನಿಯರಿಗೆ ತಿಳಿದುಬಂದಿದೆ. ದಕ್ಷಿಣ ಏಷ್ಯಾದಲ್ಲಿ ಹಣ ಸುರಿಯುವ ಮೂಲಕ ತನ್ನ ಅಧಿಕಾರವನ್ನು ಚೀನಾ ಸಮತೋಲನಗೊಳಿಸಿಕೊಳ್ಳುತ್ತಿದೆ. ಇನ್ನೊಂದೆಡೆ, ಬೀಜಿಂಗ್ ಕಡೆಗೆ ಇರಾನ್ ಮೃದು ಭಾವವನ್ನು ತೋರಿಸಿದ್ದು ಕೂಡ ಇದಕ್ಕೆ ಮತ್ತೊಂದು ಕಾರಣವಾಗಿದೆ. ಅಮೆರಿಕದ ನಿಷೇಧ ಮತ್ತು ಹಣದ ಕೊರತೆ ಮತ್ತು ಅವಕಾಶಗಳ ಕೊರತೆಯಿಂದಾಗಿ, 2016 ರಿಂದಲೂ ನನೆಗುದಿಗೆ ಬಿದ್ದಿದ್ದ 400 ಬಿಲಿಯನ್ ಡಾಲರ್‌ನ ದೊಡ್ಡ ಪ್ರಾಜೆಕ್ಟ್ ಅನ್ನು ಇರಾನ್ ಸಮ್ಮತಿಸುವ ಸ್ಥಿತಿ ಎದುರಾಗಿದೆ. ಚೀನೀಯರಿಗೆ ಭೂಮಿಯನ್ನು ನೀಡದಿರಲು ಇರಾನ್ ಯತ್ನಿಸುತ್ತಿದೆ. ಆದರೆ, ಎರಡು ಏಷ್ಯಾದ ದೊಡ್ಡ ದೇಶಗಳ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಕಾರಣವಾಗದಂತೆ ತನ್ನ ವಿದೇಶಾಂಗ ನೀತಿಯಲ್ಲಿ ಬದಲಾವಣೆ ತರಲು ಇರಾನ್ ಪ್ರಯತ್ನ ನಡೆಸಿದೆ.
ಛಾಬಹಾರ್ ರೈಲ್ವೆ ಯೋಜನೆ ವಾಸ್ತವಿಕವಾಗಿ ಭಾರತಕ್ಕೆ ಸೂಕ್ತವಾದದ್ದಲ್ಲ. ಚೀನಾದ ವ್ಯಗ್ರ ಮನೋಭಾವ ಮತ್ತು ಭಾರತದ ಆರ್ಥಿಕತೆ ಕುಸಿತದ ಮತ್ತು ಸಾಂಕ್ರಾಮಿಕ ರೋಗದ ನಂತರದಲ್ಲಿ ದೇಶಗಳು ಬದಲಾವಣೆ ಕಾಣುತ್ತಿರುವ ಸನ್ನಿವೇಶದಲ್ಲಿ ವಾಸ್ತವ ಸ್ಥಿತಿಯಲ್ಲಿ ಬದಲಾವಣೆ ಕಂಡುಬರುತ್ತಿದೆ.
- ಸಂಜಯ್ ಕಪೂರ್, ಹಿರಿಯ ಪತ್ರಕರ್ತರು