ನವದೆಹಲಿ: ಕೋವಿಡ್ -19 ಸೋಂಕಿನಿಂದ ಗುಣಮುಖರಾದ ನಂತರ ಕೆಲವು ಪ್ರಕರಣಗಳು ನಿಯಮಿತವಾಗಿ ಬರುತ್ತಿವೆ. ಹೀಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಎಸ್‌ಒಪಿಯನ್ನು ಸಿದ್ಧಪಡಿಸುತ್ತಿದೆ.
ಕೋವಿಡ್ ನಂತರದ ಸೋಂಕಿನ ವಿರುದ್ಧ ಹೋರಾಡಲು ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ಏಮ್ಸ್, ಐಸಿಎಂಆರ್, ಆರೋಗ್ಯ ಸಚಿವಾಲಯ ಮತ್ತು ಕೆಲವು ಉನ್ನತ ವೈದ್ಯಕೀಯ ಸಂಸ್ಥೆಗಳ ಸದಸ್ಯರು ಸೇರಿದಂತೆ ತಜ್ಞರ ಸಮಿತಿಯನ್ನು ರಚಿಸಿದ್ದೇವೆ ಎಂದು ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಹೇಳಿದ್ದಾರೆ.
ಎದೆನೋವು, ಶ್ವಾಸಕೋಶದ ಸೋಂಕಿನಂತಹ ಕೋವಿಡ್ ನಂತರದ ಸೋಂಕಿನ ದೂರುಗಳನ್ನು ದೇಶಾದ್ಯಂತ ಹಲವು ಆಸ್ಪತ್ರಗಳು ಸ್ವೀಕರಿಸುತ್ತಿವೆ. ನಾವು ಗುಣಮುಖರಾದ ಜನರಲ್ಲಿ ಯಾರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ಡೇಟಾವನ್ನು ಸಂಗ್ರಹಿಸುತ್ತಿದ್ದೇವೆ ಎಂದು ಡಾ. ಭಾರ್ಗವ ಹೇಳಿದರು.
ಕೋವಿಡ್-19 ಸೋಂಕಿನಿಂದ ಗುಣಮುಖನಾದ ವ್ಯಕ್ತಿಯು ಹಾಂಗ್ ಕಾಂಗ್‌ನಲ್ಲಿ ಪುನಃ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾದ ಪ್ರಕರಣವನ್ನು ಉಲ್ಲೇಖಿಸಿದ ಡಾ. ಭಾರ್ಗವ, ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ ಎಂದು ಹೇಳಿದರು.
ಕೋವಿಡ್-19 ರೋಗಿಗಳ ಪರೀಕ್ಷೆ ಮತ್ತು ರೋಗ ನಿರ್ಣಯದಲ್ಲಿ ಭಾರತ ಭಾರೀ ಬದಲಾವಣೆಯನ್ನು ಕಂಡಿದೆ ಎಂದು ಹೇಳಿದ್ದಾರೆ. 'ಒಂದು ಪರೀಕ್ಷಾ ಪ್ರಯೋಗಾಲಯದ ಸಹಾಯದಿಂದ ಮಾರ್ಚ್ 15ರವರೆಗೆ ದಿನಕ್ಕೆ 1,000 ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಆದರೆ ಈಗ 1,524 ಲ್ಯಾಬ್‌ಗಳ ಸಹಾಯದಿಂದ 1 ಮಿಲಿಯನ್ ಪರೀಕ್ಷೆಗಳನ್ನು ನಡೆಸಲಾಗಿದೆ' ಎಂದಿದ್ದಾರೆ.