ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಸುಗಮ ಆಡಳಿತ ಕಾರ್ಯನಿರ್ವಹಣೆಗೆ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಪ್ರಮುಖವಾಗಿ ಕೃಷಿ, ಶಿಕ್ಷಣ, ತೋಟಗಾರಿಕೆ, ಚುನಾವಣೆ, ಸಾಮಾನ್ಯ ಆಡಳಿತ, ಗಣಿಗಾರಿಕೆ, ವಿದ್ಯುತ್, ಪಿಡಬ್ಲ್ಯುಡಿ ಹಾಗು ಸಾರಿಗೆ ಸೇರಿದಂತೆ ಎಲ್ಲ ಇಲಾಖೆಗಳಿಗೆ ಈ ನಿಯಮ ಅನ್ವಯವಾಗಲಿದೆ.
ಪೊಲೀಸರು, ಆಲ್ ಇಂಡಿಯಾ ಸರ್ವಿಸ್ ಹಾಗೂ ಭ್ರಷ್ಟಾಚಾರ ನಿಗ್ರಹ ದಳ ಈ ನಿಯಮ ಜಾರಿ ಮಾಡುವ ಜವಾಬ್ದಾರಿ ಹೊಂದಿದೆ. ಸಾಂವಿಧಾನಿಕ ಸ್ಥಾನಮಾನ ರದ್ದುಗೊಂಡ ಬಳಿಕ ಜಮ್ಮು ಕಾಶ್ಮೀರ ಮರುಸಂಘಟನೆ ಕಾಯ್ದೆ 2019ರ ಅಡಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಈ ಅಧಿಸೂಚನೆ ಹೊರಡಿಸಿದ್ದಾರೆ.
ಪೊಲೀಸ್ ಇಲಾಖೆ, ಭ್ರಷ್ಟಾಚಾರ ನಿಗ್ರಹ ದಳ ವಿವೇಚನೆಯಿಂದ ಕಾರ್ಯನಿರ್ವಹಣೆ ಮಾಡಲಿದೆ ಎಂದು ತಿಳಿಸಿದ್ದು, ಪ್ರಮುಖ ವಿಷಯಗಳ ಕುರಿತು ಲೆಫ್ಟಿನೆಂಟ್ ಗವರ್ನರ್ ಅಥವಾ ಮುಖ್ಯಮಂತ್ರಿಗಳ ಗಮನಕ್ಕೆ ತರುವುದು ಅತಿ ಅವಶ್ಯಕವಾಗಿದೆ. ಒಂದು ವೇಳೆ ಲೆಫ್ಟಿನೆಂಟ್ ಗವರ್ನರ್ ಹಾಗೂ ಮುಖ್ಯಮಂತ್ರಿಗಳ ನಡುವೆ ಭಿನ್ನಾಬಿಪ್ರಾಯ ಉಂಟಾದರೆ, ಎರಡು ವಾರಗಳಲ್ಲಿ ಚರ್ಚೆ ನಡೆಸುವುದು ಕಡ್ಡಾಯವಾಗಿದೆ.
ಸಾಂವಿಧಾನಿಕ ವಿಶೇಷ ಸ್ಥಾನಮಾನವನ್ನು 2019ರ ಆಗಸ್ಟ್ 5 ರಂದು ರದ್ದುಪಡಿಸಲಾಗಿದೆ. ಇದಾದ ಬಳಿಕ ಜಮ್ಮುಕಾಶ್ಮೀರ ಮತ್ತು ಲಡಾಖ್ ಅನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಲಾಗಿದೆ.