ಹೊಸದಿಲ್ಲಿ: ಕೊರೊನಾ ವೈರಸ್ ತಗುಲದಂತೆ ಅರಿವು ಮೂಡಿಸಲು ದೇಶದ ಹಿರಿಯ ನಾಗರಿಕರಿಗಾಗಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಬೇಕೆಂದು ಎಲ್ಲ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯ ನಿರ್ದೇಶನ ನೀಡಿದೆ.
ಹಿರಿಯ ನಾಗರಿಕರಿಗೆ ಕೊರೊನಾ ವೈರಸ್ ಹರಡುವಿಕೆ ಕುರಿತು ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಮೂರು ಪುಟಗಳ ಮಾರ್ಗಸೂಚಿಯೊಂದನ್ನು ಹೊರಡಿಸಿದೆ. ಕೊರೊನಾ ವೈರಸ್ನಿಂದ ದೂರವಿರಲು ಹಾಗೂ ದೈಹಿಕ, ಮಾನಸಿಕವಾಗಿ ಆರೋಗ್ಯವಂತರಾಗಿರಲು 60 ವರ್ಷ ಮೇಲ್ಪಟ್ಟವರು ಅನುಸರಿಸಬೇಕಾದ ಕ್ರಮಗಳನ್ನು ಇದರಲ್ಲಿ ವಿವರಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ದೆಹಲಿ ಏಮ್ಸ್ನ ರೋಗ ಪತ್ತೆ ವಿಧಾನ ವಿಭಾಗದ ಸಹಯೋಗದಲ್ಲಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ. 2011ರ ಜನಗಣತಿಯ ಪ್ರಕಾರ ಭಾರತದಲ್ಲಿ 60 ರಿಂದ 69 ವಯೋಮಾನದ 8.8 ಕೋಟಿ, 70 ರಿಂದ 79 ವಯೋಮಾನದ 6.4 ಕೋಟಿ, 80 ವರ್ಷ ಮೇಲ್ಪಟ್ಟ 2.8 ಕೋಟಿ ಹಿರಿಯ ನಾಗರಿಕರಿದ್ದಾರೆ ಎಂಬುದನ್ನು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.