ಕೋಟಾ (ರಾಜಸ್ಥಾನ): ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮೂಲದ 38 ವರ್ಷದ ವ್ಯಕ್ತಿಯೊಬ್ಬನನ್ನು ಕೋಟಾ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಇಮ್ರಾನ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.
ಬಂಧನಕ್ಕೊಳಗಾದ ಆರೋಪಿ ಇಮ್ರಾನ್ ಕಳೆದ ಎರಡು ತಿಂಗಳಿನಿಂದ ಕೋಟಾದಲ್ಲಿ ಉಳಿದುಕೊಂಡಿದ್ದನು. ಸ್ಥಳೀಯ ಮರದ ಕೆಲಸ ಮಾಡುವವರ (ಬಡಗಿ) ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದನು.
ಆರ್ಮಿ ಕಂಟೋನ್ಮೆಂಟ್ ಪ್ರದೇಶಗಳ ಸಮೀಪವಿರುವ ಸೂಕ್ಷ್ಮ ವಲಯದ ಛಾಯಾಚಿತ್ರಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಕ್ಕಾಗಿ ಆರೋಪಿಯನ್ನು ಬಂಧಿಸಲಾಗಿದೆ. ಆತನ ಮೊಬೈಲ್ನಲ್ಲಿದ್ದ ಛಾಯಾಚಿತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಇಲ್ಲಿನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೇ, ಬಂಧಿತ ವ್ಯಕ್ತಿಯು ವಾಟ್ಸ್ಆ್ಯಪ್ ಮತ್ತು ಇತರ ಸೋಷಿಯಲ್ ಮೀಡಿಯಾ ಪ್ಲಾಟ್ಟ್ಫಾರ್ಮ್ಗಳ ಮೂಲಕ ವಿಡಿಯೋ ಕರೆ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.
ಬಂಧಿತ ವ್ಯಕ್ತಿ ಬಗ್ಗೆ ಅನುಮಾನ ವ್ಯಕ್ತವಾಗಿದ್ದರಿಂದ ಆತನ ಮೋಬಲ್ ಕರೆಗಳ ದಾಖಲೆಗಳನ್ನು ಪತ್ತೆಹಚ್ಚಲು ಅರಂಭಿಸಿದ್ದೇವೆ. ನೆರೆಯ ದೇಶದೊಂದಿಗೆ ಮಾತುಕತೆಯ ಕೆಲವು ಕರೆಗಳನ್ನು ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬೇಹುಗಾರಿಕೆ ಮಾಡುತ್ತಿದ್ದ ಬಂಧಿತ ವ್ಯಕ್ತಿಯು ಕೆಲವು ಪಾಕಿಸ್ತಾನಿ ಪ್ರಜೆಗಳೊಂದಿಗಿನ ಸಂಪರ್ಕ ಹೊಂದಿರುವುದಾಗಿ ಮತ್ತು ಪಾಕಿಸ್ತಾನದ ವಾಟ್ಸ್ಆ್ಯಪ್ ಸಂಖ್ಯೆಗೆ ಇಲ್ಲಿನ ಸೂಕ್ಷ್ಮ ಮಾಹಿತಿಯನ್ನು ಕಳಿಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗುತ್ತಿದೆ.