ಸಿಯೋನಿ (ಮಧ್ಯಪ್ರದೇಶ): ಬುಂಡೋಲ್ ಪೊಲೀಸ್ ಠಾಣಾ ವ್ಯಾಪ್ತಿಯ ಅಲೋನಿಯಾ ಎಂಬ ಟೋಲ್ ಪ್ಲಾಜಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಿಂತಿದ್ದ ತೈಲ ಟ್ಯಾಂಕರ್ಗೆ ಕಾರೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತಪಟ್ಟ ಐವರಲ್ಲಿ ನಾಲ್ವರನ್ನು ವಿಜಯ್ ಬಹದ್ದೂರ್ ಪಟೇಲ್, ಅವರ ಪತ್ನಿ ಸರಿತಾ, ಅವರ ಮಗ ಅಜಯ್ ಕುಮಾರ್ ಮತ್ತು ಓರ್ವ ರಾಧಾ ಎಂದು ಗುರುತಿಸಲಾಗಿದೆ. ಮೃತಪಟ್ಟ ಮತ್ತೊಬ್ಬ ಮಹಿಳೆ ಇನ್ನೂ ಪತ್ತೆಯಾಗಿಲ್ಲ. ಅಪಘಾತದಲ್ಲಿ ಗಾಯಗೊಂಡ ಮೃತ ವಿಜಯ್ ಬಹದ್ದೂರ್ ಪಟೇಲ್ ಅವರ ಪುತ್ರಿ ಚಂದನಾ (20) ಸೇರಿದಂತೆ ಶ್ರೇಯಾ (9) ಮತ್ತು ಪ್ರಖರ್ (4) ಎಂಬ ಮಕ್ಕಳನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಸೋಮವಾರ ರಾತ್ರಿ ಈ ಘಟನೆ ಸಂಭವಿಸಿದ್ದು ಕಾರಿನಲ್ಲಿ ಒಟ್ಟು 8 ಜನ ಪ್ರಯಾಣಿಸುತ್ತಿದ್ದರು. ಮೃತರಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಪುರುಷರಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರು : ಸ್ಥಳದಲ್ಲೇ ಇಬ್ಬರು ಸಾವು
ಮೃತರು ಉತ್ತರ ಪ್ರದೇಶದ ವಾರಣಾಸಿ ಮೂಲದವರೆಂದು ತಿಳಿದು ಬಂದಿದೆ. ಕೆಆರ್ 52 ಎನ್ 0908 ಎಂಬ ಸಂಖ್ಯೆಯ ಕಾರು ಇದಾಗಿದ್ದು, ಬನಾರಸ್ (ಉತ್ತರ ಪ್ರದೇಶ) ದಿಂದ ಕರ್ನಾಟಕದ ಬೆಂಗಳೂರಿನತ್ತ ಚಲಿಸುತ್ತಿತ್ತು. ಅತಿಯಾದ ವೇಗದಿಂದ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.
ಟೋಲ್ ಪ್ಲಾಜಾದಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ. ಕಾರಿನ ಡಿಕ್ಕಿ ರಭಸಕ್ಕೆ ಟ್ಯಾಂಕರ್ ಮುಂದೆ ತೆರಳಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿ ದುಃಖ ವ್ಯಕ್ತಪಡಿಸಿದ್ದಾರೆ.