ಹೈದರಾಬಾದ್: ಪಶ್ಚಿಮ ಬಂಗಾಳವು ಭಾರತದ ಭಾಗವಾಗಿದೆ. ಆದ್ದರಿಂದ ದೇಶದ ಸಂಸತ್ತು ಅಂಗೀಕರಿಸಿದ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ಜಾರಿಗೆ ತರಬೇಕಾಗುತ್ತದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಭಾನುವಾರ ಹೇಳಿದ್ದಾರೆ.
ಸಂಸತ್ತು ಅಂಗೀಕರಿಸುವ ಯಾವುದೇ ಕಾನೂನನ್ನು ರಾಷ್ಟ್ರದ ಪ್ರತಿಯೊಂದು ರಾಜ್ಯವೂ ಅಂಗೀಕರಿಸಬೇಕು. ಪಶ್ಚಿಮ ಬಂಗಾಳ ರಾಷ್ಟ್ರದ ಭಾಗವಾಗಿದೆ ಮತ್ತು ಮಮತಾ ಬ್ಯಾನರ್ಜಿ ಇತಿಹಾಸವನ್ನು ಓದಬೇಕು. ಭಾರತೀಯ ಸಂವಿಧಾನದ ಬಗ್ಗೆ ಸ್ವಲ್ಪ ಜ್ಞಾನವನ್ನು ಅವರು ಪಡೆಯಬೇಕು. ಸಂಸತ್ತು ಅಂಗೀಕರಿಸಿದ ಕಾನೂನನ್ನು ರಾಜ್ಯವು ಮೀರುತ್ತದೆ ಎಂಬುದು ಸಂಪೂರ್ಣವಾಗಿ ಅಸಾಂವಿಧಾನಿಕ ಮತ್ತು ಅಸಾಧ್ಯ. ರಾಷ್ಟ್ರವನ್ನು ದಾರಿ ತಪ್ಪಿಸುವ ಜನರು ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆ ಮೇಲುಗೈ ಸಾಧಿಸಲು ಬಯಸುವುದಿಲ್ಲ ಎಂದು ನಖ್ವಿ ಸುದ್ದಿಗಾರರಿಗೆ ತಿಳಿಸಿದರು.
ಪೌರತ್ವ ಕಾಯ್ದೆ ಧಾರ್ಮಿಕವಾಗಿ ಕಿರುಕುಳಕ್ಕೊಳಗಾದ ಜನರಿಗೆ ಮಾತ್ರ ಅನ್ವಯಿಸುತ್ತದೆ. ಭಾರತವು ಎಲ್ಲಾ ಭಾರತೀಯ ಮುಸ್ಲಿಮರಿಗೆ ಭದ್ರತೆ, ಸಮೃದ್ಧಿಯನ್ನು ನೀಡುತ್ತದೆ. ಜನಸಮೂಹವನ್ನು ಪ್ರಚೋದಿಸುವ ಜನರು ಈ ರಾಷ್ಟ್ರವು ನಿಂತಿರುವ ಅಡಿಪಾಯಕ್ಕೆ ವಿರುದ್ಧವಾಗಿರುತ್ತಾರೆ. ಅಂತಹ ಜನರ ನೈಜ ಉದ್ದೇಶಗಳನ್ನು ನಾಗರಿಕರು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಸಿಎಎ ಅನುಷ್ಠಾನಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಸಹ ಹರಿದು ಹಾಕಿದ್ದೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಹೇಳಿದ್ದಾರೆ.
ಹುನಾರ್ ಹಾಟ್ ಎಂಬ ಕರಕುಶಲ ಪ್ರದರ್ಶನವನ್ನು ಉದ್ಘಾಟಿಸಲು ನಖ್ವಿ ಹೈದರಾಬಾದ್‌ಗೆ ಆಗಮಿಸಿದ್ದರು. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.