ಬೆಂಗಳೂರು: ಅನರ್ಹಗೊಂಡಿರುವ ಶಾಸಕರ ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗದಿಂದ ಉಪಚುನಾವಣೆ ದಿನಾಂಕ ಮರುನಿಗದಿಯಾಗಿದೆ.
ಈಗಾಗಲೇ ಘೋಷಣೆಯಾಗಿದ್ದ ದಿನಾಂಕದ ಪ್ರಕಾರ ಅಕ್ಟೋಬರ್ 21ರಂದು ಮತದಾನ ನಡೆಯಬೇಕಾಗಿತ್ತು. ಆದರೆ ಸುಪ್ರೀಂಕೋರ್ಟ್ ಅದಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದ್ದರಿಂದ ಇಂದು ಚುನಾವಣಾ ಆಯೋಗ ಹೊಸ ದಿನಾಂಕ ಘೋಷಣೆ ಮಾಡಿ ಆದೇಶ ಹೊರಡಿಸಿದೆ.
ಹೊಸ ದಿನಾಂಕದ ಪ್ರಕಾರ ಡಿಸೆಂಬರ್ 5ರಂದು 15 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಮಾಡಲು ನವೆಂಬರ್ 18ರಂದು ಕೊನೆಯ ದಿನವಾಗಿದೆ. ನ.19 ನಾಮಪತ್ರ ಪರಿಶೀಲನೆ ಹಾಗೂ 21ರಂದು ನಾಪಪತ್ರ ಹಿಂಪಡೆದುಕೊಳ್ಳಬಹುದಾಗಿದೆ. ಇನ್ನು ಡಿಸೆಂಬರ್ 09ರಂದು ಚುನಾವಣೆಯ ಫಲಿತಾಂಶ ಹೊರಬೀಳಲಿದೆ.
ನ.11ರಿಂದಲೇ ಉಪ ಚುನಾವಣೆಗೆ ನೀತಿ ಸಂಹಿತಿ ಜಾರಿಗೆ ಬರಲಿದೆ. ನಾಮಪತ್ರ ಸಲ್ಲಿಕೆ ಆರಂಭವಾಗುವ ದಿನಾಂಕದಿಂದ ನೀತಿ ಸಂಹಿತೆ ಜಾರಿಯಲ್ಲಿ ಇರುತ್ತದೆ. ಚುನಾವಣೆ ಪ್ರಕ್ರಿಯೆ ಅಂತ್ಯಗೊಳ್ಳುವ ಡಿಸೆಂಬರ್ 11 ರಂದು ಮಾದರಿ ನೀತಿ ಸಂಹಿತೆ ಮುಕ್ತಾಯವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಹಳೆ ಉಪ ಚುನಾವಣೆ ವೇಳಾಪಟ್ಟಿ ಪ್ರಕಾರ ಈಗಾಗಲೇ ಜಾರಿಯಲ್ಲಿದ್ದ ನೀತಿ ಸಂಹಿತೆಯನ್ನು ಅಮಾನತ್ತು ಮಾಡಲಾಗಿದೆ ಎಂದು ಕೇಂದ್ರ ಚುನಾವಣೆ ಆಯೋಗ ತನ್ನ ಸ್ಪಷ್ಟನೆಯಲ್ಲಿ ತಿಳಿಸಿದೆ.