ಬೆಂಗಳೂರು: ಉಪ ಚುನಾವಣೆಯಲ್ಲಿ ಬಾಕಿ ಇರುವ 7 ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿ ಕಾಂಗ್ರೆಸ್ ಪಟ್ಟಿ ಪ್ರಕಟಿಸಿದೆ.
ಡಿಸೆಂಬರ್ ತಿಂಗಳಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ಎಲ್ಲ ಕ್ಷೇತ್ರದಿಂದಲೂ ಸ್ಪರ್ಧಿಸಲಿರುವ ಕಾಂಗ್ರೆಸ್ ಮೊದಲ ಹಂತದಲ್ಲಿ ಎಂಟು ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಪ್ರಕಟಿಸಿತ್ತು. ಉಳಿದ ಏಳು ಅಭ್ಯರ್ಥಿಗಳ ಪಟ್ಟಿಯನ್ನು ಬಾಕಿ ಉಳಿಸಿಕೊಂಡಿದ್ದು ಇಂದು ಆರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಯಶವಂತಪುರ ಕ್ಷೇತ್ರವನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ ಪಕ್ಷ. ಯಶವಂತ ಪುರಕ್ಕೆ ಪಾಳ್ಯ ನಾಗರಾಜು ಬಹುತೇಕ ಅಭ್ಯರ್ಥಿ ಆಗುವ ಸಂಭವ ಇದೆ ಎಂಬ ಮಾತು ಕೇಳಿಬರುತ್ತಿದೆ. ಇವರು ಬೆಂಗಳೂರಿನ ವಿಜಯನಗರ ಶಾಸಕ ಹಾಗೂ ಮಾಜಿ ಸಚಿವ ಎಂ ಕೃಷ್ಣಪ್ಪ ಅವರ ಆಪ್ತ ಎಂಬ ಮಾಹಿತಿ ಇದೆ.
- ಅಥಣಿ - ಗಜಾನನ ಬಾಲಚಂದ್ರ ಮಂಗಸೂಲಿ
- ಕಾಗವಾಡ - ರಾಜು ಕಾಗೆ (ಭರಮಗೌಡ ಅಲಾಗೌಡ ಕಾಗೆ)
- ಗೋಕಾಕ್ - ಲಖನ್ ಜಾರಕಿಹೊಳಿ
- ವಿಜಯನಗರ - ವೆಂಕಟರಾವ್ ಘೋರ್ಪಡೆ
- ಶಿವಾಜಿನಗರ - ರಿಜ್ವಾನ್ ಅರ್ಷದ್
- ಕೆ.ಆರ್.ಪೇಟೆ - ಕೆ.ಬಿ.ಚಂದ್ರಶೇಖರ್
ಮೊದಲ ಪಟ್ಟಿಯಲ್ಲಿ ಯಾರ್ಯಾರು?
ವಾರದ ಹಿಂದೆ ಪ್ರಕಟವಾಗಿದ್ದ ಮೊದಲ ಪಟ್ಟಿಯಲ್ಲಿ 8 ಕ್ಷೇತ್ರಗಳನ್ನು ಅಂತಿಮಗೊಳಿಸಲಾಗಿತ್ತು. ಆ ಪ್ರಕಾರ ಮಹಾಲಕ್ಷ್ಮಿಲೇಔಟ್ನಿಂದ ಎಂ. ಶಿವರಾಜು, ಚಿಕ್ಕಬಳ್ಳಾಪುರದಿಂದ ಆಂಜಿನಪ್ಪ, ಹುಣಸೂರಿನಿಂದ ಎಚ್‌ಪಿ ಮಂಜುನಾಥ್, ಹಿರೇಕೆರೂರಿನಿಂದ ಬಿಎಚ್ ಬನ್ನಿಕೋಡ್, ರಾಣೆಬೆನ್ನೂರಿನಿಂದ ಕೆ ಬಿ ಕೋಳಿವಾಡ, ಯಲ್ಲಾಪುರದಿಂದ ಭೀಮಣ್ಣ ನಾಯಕ್, ಹೊಸಕೋಟೆಯಿಂದ ಪದ್ಮಾವತಿ ಸುರೇಶ್ ಹಾಗೂ ಕೆಆರ್ ಪುರಂನಿಂದ ವಿಧಾನಪರಿಷತ್ ಸದಸ್ಯ ಎಂ ನಾರಾಯಣಸ್ವಾಮಿ ಆಯ್ಕೆಯಾಗಿದ್ದರು.