ಅಹ್ಮದ್ನಗರ/ರೈಟೆ ವಾಗ್ಪುರ್ : ಸುಮಾರು 1.5 ಲಕ್ಷರೂ ಬೆಲೆಯ ಮಂಗಳಸೂತ್ರವನ್ನು ಗೂಳಿಯೊಂದು ನುಂಗಿರುವ ಘಟನೆ ಮಹಾರಾಷ್ಟ್ರದ ಅಹ್ಮದ್ನಗರದ ರೈಟೆ ವಾಗ್ಪುರ್ ಗ್ರಾಮದಲ್ಲಿ ನಡೆದಿದೆ.
ಈ ಗ್ರಾಮದಲ್ಲಿ ಆಗಸ್ಟ್ 30 ರಂದು ಬೈಲ್ ಪೊಲ ಅಂದರೆ ಗೂಳಿ ಹಬ್ಬವನ್ನು ಆಚರಿಸಲಾಯ್ತು .ಇದು ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧಗಳ ಪ್ರತೀಕವಾಗಿ ಆಚರಿಸುವ ಹಬ್ಬ. ಗೂಳಿಗಳನ್ನು ದೇವರಿಗೆ ಸಮಾನ ಎಂದು ಭಾವಿಸಿ ಪೂಜಿಸಲಾಗುತ್ತದೆ. ಈ ಹಬ್ಬದಂದು ಮನೆಯಲ್ಲಿ ಸಾಕಿರುವ ಗೂಳಿಗಳಿಗೆ ಪೂಜಿಸಿ, ಅದರ ಹಣೆಯಿಂದ ಆಶೀರ್ವಾದ ಪಡೆಯುವುದು ಸಂಪ್ರದಾಯ. ಹೀಗಾಗಿ ಮನೆಯೊಡತಿ ಗೂಳಿಗೆ ಪೂಜಿಸಿ ಮಾಂಗಲ್ಯವನ್ನು ಅದರ ಹಣೆಗೆ ಮುಟ್ಟಿಸಿ ಆಶೀರ್ವಾದ ಪಡೆದು, ಈ ಸರವನ್ನು ಗೂಳಿಗೆ ನೀಡುವ ಆಹಾರದ ತಟ್ಟೆಯಲ್ಲಿಯೇ ಇಟ್ಟಿದ್ದಾರೆ. ಈ ವೇಳೆ ಕರೆಂಟ್ ಹೋಗಿದ್ದು, ದೀಪ ತರಲು ಮನೆಯೊಡತಿ ಒಳಗೆ ಹೋಗಿದ್ದಾಳೆ. ಈ ಸಂದರ್ಭದಲ್ಲಿ ಅಲ್ಲಿದ್ದ ಆಹಾರವನ್ನೆಲ್ಲಾ ಗೂಳಿ ತಿಂದಿದೆ. ಇದೇ ತಟ್ಟೆಯಲ್ಲಿ ಆಕೆಯ ಮಾಂಗಲ್ಯ ಸೂತ್ರವಿದ್ದು, ಅದು ಕೂಡ ಗೂಳಿ ಹೊಟ್ಟೆ ಸೇರಿದೆ. ಇದರಿಂದ ಕಂಗಾಲದ ಮನೆಯೊಡತಿ ತಕ್ಷಣಕ್ಕೆ ಪತಿಗೆ ವಿಷಯ ಮುಟ್ಟಿಸಿದ್ದಾರೆ.
ಗೂಳಿ ಬೆಳಗ್ಗೆ ಸಗಣಿ ಹಾಕುವ ವೇಳೆ ಮಂಗಳಸೂತ್ರ ಕೂಡ ಹೊರಬರಬಹುದು ಎಂದು ದಂಪತಿಗಳಿಬ್ಬರು ಕಾದಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಕಡೆಗೆ ಪಶು ವೈದ್ಯರ ಬಳಿ ಹೋದಾಗ ಗೂಳಿ ಹೊಟ್ಟೆಯಲ್ಲಿ ಚಿನ್ನದ ತಾಳಿ ಸರವಿರುವುದು ಪತ್ತೆಯಾಗಿದೆ. ಬಳಿಕ ವೈದ್ಯರು ಆಪರೇಷನ್ ಮಾಡಿ ಅದನ್ನು ಹೊರ ತೆಗೆದಿದ್ದಾರೆ.